
ಬೆಂಗಳೂರು: ನಮ್ಮ ಮೆಟ್ರೊದ ಗುಲಾಬಿ ಮಾರ್ಗದಲ್ಲಿ 2026ರ ಮೇ ತಿಂಗಳಲ್ಲಿ ಸಂಚಾರ ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೊ ಗುಲಾಬಿ ಮಾರ್ಗವು 13.76 ಕಿ.ಮೀ ಉದ್ದದ ಸುರಂಗವನ್ನು ಒಳಗೊಂಡಿದೆ. ಈ ಮಾರ್ಗ ದಕ್ಷಿಣ ಹಾಗೂ ಉತ್ತರ ಬೆಂಗಳೂರನ್ನು ಬೆಸೆಯಲಿದೆ. ಉತ್ತಮ ಸಂಪರ್ಕಕ್ಕೆ ನಮ್ಮ ಬದ್ಧತೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಅರೆ ಸಂಚಾರ?:
ಅತಿ ಉದ್ದದ ಭೂಗತ ಮಾರ್ಗವನ್ನು ಹೊಂದಿರುವ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಭೂಗತ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದರೂ ತಾಂತ್ರಿಕ ಕೆಲಸಗಳು ಬಾಕಿ ಇರುವುದರಿಂದ ಇನ್ನೂ ಒಂದು ವರ್ಷ ಭೂಗತ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭವಾಗುವುದಿಲ್ಲ. ಎತ್ತರಿಸಿದ ಮಾರ್ಗದಲ್ಲಿ ಆರು ತಿಂಗಳ ಒಳಗೆ ಮೆಟ್ರೊ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಗುಲಾಬಿ ಮಾರ್ಗವು 21.26 ಕಿ.ಮೀ. ಉದ್ದ ಹೊಂದಿದ್ದು, ಅದರಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಾಗಿದೆ. ಭೂಗತ ಮಾರ್ಗದಲ್ಲಿ 12 ನಿಲ್ದಾಣಗಳು ಹಾಗೂ ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳು ನಿರ್ಮಾಣಗೊಂಡಿವೆ. ತಾವರೆಕೆರೆಯಿಂದ ಕಾಳೇನ ಅಗ್ರಹಾರದವರೆಗೆ 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗದಲ್ಲಿ ಸಿವಿಲ್ ಕಾಮಗಾರಿಗಳು, ಹಳಿ ಅಳವಡಿಕೆ ಸಹಿತ ಬಹುತೇಕ ಕಾರ್ಯಗಳು ಪೂರ್ಣಗೊಂಡಿವೆ. ತಾಂತ್ರಿಕ ಕೆಲಸಗಳಷ್ಟೇ ಬಾಕಿ ಉಳಿದಿದ್ದು, ಆರು ತಿಂಗಳಲ್ಲಿ ಸಂಚಾರಕ್ಕೆ ತಯಾರಾಗಲಿದೆ.
ಸುರಂಗ ಮಾರ್ಗದಲ್ಲಿ ಸಿವಿಲ್ ಕಾಮಗಾರಿಗಳು ಮುಗಿದಿದ್ದರೂ ಟ್ರ್ಯಾಕಿಂಗ್ ಕೆಲಸ, ವಿದ್ಯುತ್ ಸಂಪರ್ಕ ವ್ಯವಸ್ಥೆ, ಹವಾ ನಿಯಂತ್ರಣ ವ್ಯವಸ್ಥೆ ಸೇರಿದಂತೆ ತಾಂತ್ರಿಕ ಕಾಮಗಾರಿಗಳು ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಬೇಕು ಎಂದು ವಿವರ ನೀಡಿದ್ದಾರೆ.
ಮೂರು ಇಂಟರ್‌ಚೇಂಜ್
ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರ ಹುಳಿಮಾವು ಐಐಎಂಬಿ ಜೆ.ಪಿ. ನಗರ ನಾಲ್ಕನೇ ಹಂತ ಜಯದೇವ ಆಸ್ಪತ್ರೆ ಸ್ವಾಗತ್ ರೋಡ್ ಕ್ರಾಸ್ ಡೇರಿ ಸರ್ಕಲ್ ಮೈಕೊ ಇಂಡಸ್ಟ್ರೀಸ್ ಲ್ಯಾಂಗ್‌ಫೋರ್ಡ್ ಟೌನ್ ವೆಲ್ಲಾರ ಎಂ.ಜಿ. ರಸ್ತೆ ಶಿವಾಜಿನಗರ ಕಂಟೋನ್ಮೆಂಟ್ ಪಾಟರಿ ಟೌನ್ ಟ್ಯಾನರಿ ರಸ್ತೆ ವೆಂಕಟೇಶಪುರ ಅರೇಬಿಕ್ ಕಾಲೇಜು ನಾಗವಾರ ಸೇರಿ ಒಟ್ಟು 18 ನಿಲ್ದಾಣಗಳಿವೆ. ಎಂ.ಜಿ. ರಸ್ತೆ ಜಯದೇವ ಆಸ್ಪತ್ರೆ ನಾಗವಾರದಲ್ಲಿ ಇಂಟರ್‌ಜೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಎಂ.ಜಿ. ರಸ್ತೆಯಲ್ಲಿ ನೇರಳ ಮಾರ್ಗವನ್ನು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗವನ್ನು ನಾಗವಾರದಲ್ಲಿ ನೀಲಿ ಮಾರ್ಗವನ್ನು ಈ ಗುಲಾಬಿ ಮಾರ್ಗವು ಸಂಪರ್ಕಿಸಲಿದೆ. ‘ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಮಾತ್ರ ನಾಲ್ಕು ಕಡೆಗಳಿಗೆ ಪ್ರವೇಶ/ನಿರ್ಗಮನ ಇರಲಿದ್ದು ಉಳಿದ ನಿಲ್ದಾಣಗಳಲ್ಲಿ ಎರಡು ದಿಕ್ಕುಗಳಿಗೆ ಮಾತ್ರ ಪ್ರವೇಶ/ನಿರ್ಗಮನ ಇರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.