ADVERTISEMENT

ಐದು ತಿಂಗಳ ನಂತರ ಮೆಟ್ರೊ ರೈಲು ಸಂಚಾರ ಆರಂಭ: ಬೆರಳೆಣಿಕೆಯಷ್ಟು ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 5:36 IST
Last Updated 7 ಸೆಪ್ಟೆಂಬರ್ 2020, 5:36 IST
   

ಬೆಂಗಳೂರು: ಸರಿಯಾಗಿ 169 ದಿನಗಳ ಬಿಡುವಿನ ನಂತರ ನಗರದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಿದೆ.

ಬೈಯಪ್ಪನಹಳ್ಳಿಯಿಂದ ಸೋಮವಾರ ಬೆಳಿಗ್ಗೆ 8ಗಂಟೆಯಿಂದ ಸಾರ್ವಜನಿಕ ಸೇವೆ ಪುನರಾರಂಭವಾಯಿತು. ನೇರಳೆ ಮಾರ್ಗದಲ್ಲಿ ಅಂದರೆ, ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಿಲ್ದಾಣದ ನಡುವೆ ಮಾತ್ರ ರೈಲುಗಳು ಸಂಚರಿಸುತ್ತಿವೆ.

ರೈಲುಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಕಂಡು ಬಂದರು. ಮೊದಲು ಹೊರಟ ರೈಲಿನಲ್ಲಿ 10ರಿಂದ 12 ಪ್ರಯಾಣಿಕರು ಮಾತ್ರ ಇದ್ದರು.

ADVERTISEMENT

ಒಂದು‌ ಗಂಟೆ ಮುಂಚೆಯೇ ರಿಚಾರ್ಜ್ ಮಾಡಿ:ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ನಿಲ್ದಾಣಗಳಲ್ಲಿ ಟೋಕನ್ ವಿತರಿಸುತ್ತಿಲ್ಲ.‌ ಆನ್‌ಲೈನ್‌ನಲ್ಲಿ ಒಂದು ಗಂಟೆ ಮೊದಲೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬೇಕು. ಸುಮಾರು ಅರ್ಧ ಗಂಟೆ ನಂತರ ಸ್ಮಾರ್ಟ್ ಕಾರ್ಡ್‌ನಲ್ಲಿ ಮೊತ್ತ ಸೇರ್ಪಡೆಯಾಗುತ್ತದೆ.

ಕೌಂಟರ್‌ಗಳಲ್ಲಿ ಹೊಸ ಕಾರ್ಡ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ರಿಚಾರ್ಜ್ ಮಾಡುವುದಿಲ್ಲ.

ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4.30ರಿಂದ 7.30ರವರೆಗೆ ರೈಲುಗಳು ಸಂಚರಿಸಲಿವೆ. ದಟ್ಟಣೆ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಸೆ.9 ರಿಂದ‌ ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.