ADVERTISEMENT

ನಮ್ಮ ಮೆಟ್ರೊಗೆ ಕೆಂಪೇಗೌಡರ ಹೆಸರಿಡಿ: ನಂಜಾವಧೂತ ಸ್ವಾಮೀಜಿ ಆಗ್ರಹ

ರಾಜ್ಯ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ನಂಜಾವಧೂತ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 15:56 IST
Last Updated 12 ಅಕ್ಟೋಬರ್ 2025, 15:56 IST
<div class="paragraphs"><p>ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. </p></div>

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

   

ಬೆಂಗಳೂರು: ‘ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ನಮ್ಮ ಮೆಟ್ರೊಗೆ ನಾಮಕರಣ ಮಾಡಬೇಕು’ ಎಂದು ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದರು. 

ರಾಜ್ಯ ಒಕ್ಕಲಿಗರ ಸಂಘ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿದರು. 

ADVERTISEMENT

‘ಕೆಂಪೇಗೌಡರು ದೂರದೃಷ್ಟಿ ಹೊಂದಿದ್ದರು. ಇಡೀ ಜಗತ್ತೆ ತಿರುಗಿ ನೋಡುವಂತೆ ನಾಡನ್ನು ಕಟ್ಟಿದರು. ಆದ್ದರಿಂದ ನಮ್ಮ ಮೆಟ್ರೊದ ಹೆಸರನ್ನು ಕೆಂಪೇಗೌಡ ಮೆಟ್ರೊ ಎಂದು ಬದಲಾಯಿಸಬೇಕು. ಬಸವಣ್ಣ ಅವರು ಸರ್ವಶ್ರೇಷ್ಠರು. ಅವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕಲಾಗಿದೆ. ಅವರ ಹೆಸರನ್ನು ಬೇರೆ ದೊಡ್ಡ ದೊಡ್ಡ ಯೋಜನೆಗಳಿಗೆ ಇಡಬಹುದು. ಕಲ್ಯಾಣ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಕೆಂಪೇಗೌಡ ಅವರ ಹೆಸರನ್ನು ಇಡಲು ಸಾಧ್ಯವಿಲ್ಲ. ಆದ್ದರಿಂದ ಬೆಂಗಳೂರಿನ ನಮ್ಮ ಮೆಟ್ರೊಗೆ ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಇಡಬೇಕು. ಇದು ನಮ್ಮ ಹಲವು ವರ್ಷಗಳ ಬೇಡಿಕೆಯಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಬೇಕು’ ಎಂದು ಒತ್ತಾಯಿಸಿದರು. 

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚಪ್ಪಗೌಡ, ‘ಎಚ್. ಕಾಂತರಾಜ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದ್ದ 10 ವರ್ಷಗಳ ಹಿಂದಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಜಾರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದರು. ಈ ವರದಿ ಅನುಷ್ಠಾನದ ವಿರುದ್ಧ ನಾವು ಹೋರಾಡಿ ಜಯಶೀಲರಾದೆವು. ಸಿದ್ದರಾಮಯ್ಯ ಅವರು ಸಮೀಕ್ಷೆ ಆಗಲೇ ಬೇಕು ಎಂದು ಹಟ ಹಿಡಿದು, ಈಗ ಮತ್ತೊಮ್ಮೆ ಸಮೀಕ್ಷೆ ನಡೆಸುತ್ತಿದ್ದಾರೆ. ಸರ್ಕಾರದಿಂದ ಸಿಗುವ ಅವಕಾಶಗಳು ತಪ್ಪಿಹೋಗುವ ಸಾಧ್ಯತೆ ಇರುವುದರಿಂದ, ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಬೇಕು’ ಎಂದರು. 

‘ಒಕ್ಕಲಿಗರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಸಮುದಾಯದ ವಿಷಯ ಬಂದಾಗ ನಾವೆಲ್ಲ ಒಂದಾಗಬೇಕು. ಶೀಘ್ರದಲ್ಲಿಯೇ ಸಂಘದ ಸರ್ವಸದಸ್ಯರ ಸಭೆಯನ್ನೂ ನಡೆಸಲಾಗುತ್ತದೆ’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಪಡೆದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಒಕ್ಕಲಿಗ ಸಮುದಾಯದ 705 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಇದೇ ವೇಳೆ ಸಮುದಾಯದ ಸಾಧಕರಾದ ನಟ ಶ್ರೀನಗರ ಕಿಟ್ಟಿ, ಎಂಜಿನಿಯರ್ ರಿತುಪರ್ಣ ಕೆ.ಎಸ್., ರೈತ ಸಿ. ಪುಟ್ಟಸ್ವಾಮಿ, ಯೋಧ ಬಿ.ಎಸ್. ಭೀಮೇಗೌಡ ಹಾಗೂ ನಿವೃತ್ತ ಪ್ರಾಧ್ಯಾಪಕ ಮಾಗಡಿ ಆರ್. ಗುರುದೇವ್ ಅವರನ್ನು ಸನ್ಮಾನಿಸಲಾಯಿತು.  

ಯುವಜನರು ಯಂತ್ರಮಾನವರಾಗದೆ ಭಾವನೆಗಳಿಗೆ ಬೆಲೆ ಕೊಡಬೇಕು. ಹಣದ ಹಿಂದೆ ಹೋಗಿ ಹೆತ್ತವರನ್ನು ಮರೆಯಬಾರದು. ಸಮಾಜಕ್ಕೆ ಆಸ್ತಿಯಾಗಿ ಜಗತ್ತಿಗೆ ಕೊಡುಗೆ ನೀಡಬೇಕು

--ನಂಜಾವಧೂತ ಸ್ವಾಮೀಜಿ ಸ್ಪಟಿಕಪುರಿ ಮಠ

ಶೈಕ್ಷಣಿಕ ಆಡಳಿತ ಸೇರಿ ವಿವಿಧ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದವರು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಿಂದೆ ಉಳಿದಿದ್ದು ಈ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು

-ಜಯಪ್ರಕಾಶ್ ಗೌಡ ನಿವೃತ್ತ ಪ್ರಾಧ್ಯಾಪಕ

‘ಎಚ್‌ಡಿಡಿ ಹೆಸರಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ

‘ಒಕ್ಕಲಿಗರ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ₹ 700 ಕೋಟಿ ನಿಧಿ ಹೊಂದಿದೆ. ಈ ಹಣದಲ್ಲಿ ಸಂಘವು ಜಮೀನು ಖರೀದಿಸಿ ಇನ್ನೊಂದು ವೈದ್ಯಕೀಯ ಕಾಲೇಜನ್ನು ನಿರ್ಮಿಸಬೇಕು. ಆ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೆಸರನ್ನು ಇಡಬೇಕು. ಅವರ ಹೆಸರಿಡುವುದಕ್ಕೆ ಸಮುದಾಯ ಕೂಡ ಒಪ್ಪಲಿದೆ. ಎಂಜಿನಿಯರಿಂಗ್ ಕಾಲೇಜು ಕೂಡ ಸ್ಥಾಪಿಸಿ ಸಮುದಾಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೀಟು ಒದಗಿಸಬೇಕು’ ಎಂದು ಸಂಘದ ಪದಾಧಿಕಾರಿಗಳಿಗೆ ಆಗ್ರಹಿಸಿದ ನಂಜಾವಧೂತ ಸ್ವಾಮೀಜಿ ಇದಕ್ಕೆ ಸಮ್ಮತಿ ಇದ್ದವರು ಕೈ ಎತ್ತುವಂತೆ ಸೂಚಿಸಿದರು. ಅಧ್ಯಕ್ಷ ಕೆಂಚಪ್ಪಗೌಡ ಸೇರಿ ವೇದಿಕೆ ಮೇಲಿದ್ದ ಪದಾಧಿಕಾರಿಗಳು ಕೈ ಎತ್ತಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.