ADVERTISEMENT

ಮೈಸೂರು ರಸ್ತೆ ನಿಲ್ದಾಣದ ಬಳಿ ತಾಂತ್ರಿಕ ದೋಷ: 40 ನಿಮಿಷ ಸ್ಥಗಿತಗೊಂಡ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:23 IST
Last Updated 1 ಸೆಪ್ಟೆಂಬರ್ 2019, 19:23 IST
   

ಬೆಂಗಳೂರು:ಮೈಸೂರು ರಸ್ತೆ ಮತ್ತು ವಿಜಯನಗರ ಮೆಟ್ರೊ ನಿಲ್ದಾಣದ ನಡುವೆ ಶನಿವಾರ ಸಂಜೆ 6.34ರಿಂದ 7.38ರವರೆಗೆ ಮೆಟ್ರೊ ರೈಲುಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಆತಂಕದ ಕ್ಷಣಗಳನ್ನು ಎದುರಿಸಿದರು. ಶುಕ್ರವಾರವಷ್ಟೇ ದಾಖಲೆ ಸಂಖ್ಯೆಯ ಪ್ರಯಾಣಿಕರು ಮೆಟ್ರೊ ಬಳಸಿದ್ದರು.

ಪ್ರಯಾಣಿಕರನ್ನು ದೀಪಾಂಜಲಿ ನಗರ ನಿಲ್ದಾಣದಲ್ಲಿ ಇಳಿಸಿ ರೈಲನ್ನು ಪರಿಶೀಲಿಸಿದ ಸಿಬ್ಬಂದಿ ತಾಂತ್ರಿಕ ದೋಷ ಸರಿಪಡಿಸಿದ ನಂತರ, ರೈಲು ಸಂಚಾರ ಮುಂದುವರಿಯಿತು. ರೈಲು ಸ್ಥಗಿತಗೊಳ್ಳಲು ನಿಖರ ಕಾರಣ ಏನೆಂಬುದನ್ನು ಬಿಎಂಆರ್‌ಸಿಎಲ್‌ ತಿಳಿಸಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದರೂ, ಕರೆ ಸ್ವೀಕರಿಸಲಿಲ್ಲ.

‘40 ನಿಮಿಷಕ್ಕೂ ಹೆಚ್ಚು ಕಾಲ ರೈಲು ಸಂಚಾರ ಸ್ಥಗಿತಗೊಂಡರೂ, ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡಲಿಲ್ಲ. ನಿಲ್ದಾಣದಲ್ಲಿ ಘೋಷಣೆಯನ್ನೂ ಮಾಡಲಿಲ್ಲ. ಮೆಟ್ರೊ ಅಧಿಕಾರಿಗಳಿಗೆ ಹೇಳುವವರು–ಕೇಳುವವರು ಇಲ್ಲದಂತಾಗಿದೆ’ ಎಂದು ದೀಪಾಂಜಲಿ ನಗರದ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಪ್ರಯಾಣಿಕರ ಸಂಖ್ಯೆ ಹೆಚ್ಚಳದ ಬಗ್ಗೆ ಟ್ವೀಟ್‌ ಮಾಡುವ ಮೆಟ್ರೊ, ಜನರಿಗೆ ತೊಂದರೆಯಾದಾಗ ಪ್ರತಿಕ್ರಿಯಿಸುವುದಿಲ್ಲ. ಸರಿಯಾದ ಮಾಹಿತಿ ನೀಡುವುದಿಲ್ಲ. ದಟ್ಟಣೆಯಸಮಯದಲ್ಲಿ ಮೆಟ್ರೊದಲ್ಲಿಸಂಚರಿಸಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ’ ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

‘ಹಸಿರು ಮಾರ್ಗದಲ್ಲಿನ ಎಲ್ಲ ರೈಲುಗಳು ಜೂನ್‌ 19ರ ವೇಳೆಗೆ ಆರು ಬೋಗಿಗಳೊಂದಿಗೆ ಸಂಚರಿಸಲಿವೆ ಎಂದು ಹೇಳಲಾಗಿತ್ತು. ಆದರೆ, ಈ ಮಾರ್ಗದ ಹೆಚ್ಚಿನ ಈ ರೈಲುಗಳಲ್ಲಿ ಇನ್ನೂ ಮೂರು ಬೋಗಿಗಳೇ ಇವೆ. ಆದರೂ 8ರಿಂದ 10 ನಿಮಿಷಕ್ಕೊಂದು ರೈಲು ಬರುತ್ತಿರುವುದರಿಂದ ದಟ್ಟಣೆ ಹೆಚ್ಚಾಗುತ್ತಿದೆ’ ಎಂದು ನಾಗರಿಕರು ದೂರಿದ್ದಾರೆ.

ಸದ್ಯ, ಹಸಿರು ಮಾರ್ಗದಲ್ಲಿ ಸಂಚರಿಸುವ ಒಂದು ರೈಲು ಮಾತ್ರ 6 ಬೋಗಿಗಳನ್ನು ಹೊಂದಿದೆ.

ನೇರಳೆ ಮಾರ್ಗದಲ್ಲಿ 20 ರೈಲುಗಳು 6 ಬೋಗಿಗಳನ್ನು ಹೊಂದಿವೆ.

ದಾಖಲೆಯ ಪ್ರಯಾಣಿಕರು

‘ನಮ್ಮ ಮೆಟ್ರೊ’ದಲ್ಲಿ ಶುಕ್ರವಾರ ದಾಖಲೆ ಸಂಖ್ಯೆಯ ಪ್ರಯಾಣಿಕರು ಸಂಚರಿಸಿದರು. ಅಂದು, 4,58, 238 ಪ್ರಯಾಣಿಕರು ಮೆಟ್ರೊ ಬಳಸಿದ್ದಾರೆ ಎಂದು ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ ಹೇಳಿದೆ.

ಆ. 14ರಂದು 4,53, 744 ಪ್ರಯಾಣಿಕರು ಸಂಚರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಕಳೆದ ಏಪ್ರಿಲ್‌ 5ರಂದು 4,52,563 ಮಂದಿ ಪ್ರಯಾಣಿಸಿದ್ದರು.

ವಾರಾಂತ್ಯ ಹಾಗೂ ಗಣೇಶೋತ್ಸವ ಹಿನ್ನೆಲೆಯಲ್ಲಿ ಸಾಲು ರಜೆಗಳಿರುವುದರಿಂದ ಊರಿಗೆ ತೆರಳಬೇಕಾದವರು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೊ ಬಳಸಿದ್ದಾರೆ. ಯಶವಂತಪುರ, ಮೆಜೆಸ್ಟಿಕ್‌, ಮೈಸೂರು ರಸ್ತೆ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ತೆರಳುವವರು ಹೆಚ್ಚಾಗಿ ಮೆಟ್ರೊ ರೈಲು ಬಳಸಿದ್ದಾರೆ ಎಂದು ನಿಗಮ ಹೇಳಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಎಂಆರ್‌ಸಿಎಲ್‌ ಪ್ರಯಾಣಿಕರಿಗೆ ಧನ್ಯವಾದ ಹೇಳಿದೆ.

ಗಣೇಶ ಮೂರ್ತಿ ಒಯ್ಯಲು ಅನುಮತಿ

ಮೆಟ್ರೊ ರೈಲಿನೊಳಗೆ ಗಣೇಶ ಮೂರ್ತಿ ಒಯ್ಯಲು ಬಿಎಂಆರ್‌ಸಿಎಲ್‌ ಅನುಮತಿ ನೀಡಿದೆ. ಆದರೆ, ಲೋಹ ಶೋಧಕ ಹಾಗೂ ಭದ್ರತಾ ಸಿಬ್ಬಂದಿಯಿಂದ ತಪಾಸಣೆ ನಡೆದ ನಂತರವೇ ಒಳಗೆ ಒಯ್ಯಲು ಅವಕಾಶವಿದೆ ಎಂದು ನಿಗಮ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.