ADVERTISEMENT

ವೆಬ್ ಗರ್ಡರ್ ಅಳವಡಿಕೆ ಮುಂದೂಡಿಕೆ | ಮೆಟ್ರೊ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಬೈಯಪ್ಪನಹಳ್ಳಿ– ವೈಟ್‌ಫೀಲ್ಡ್‌ ಮಾರ್ಗದಲ್ಲಿ ಸವಾಲಿನ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:30 IST
Last Updated 23 ಡಿಸೆಂಬರ್ 2022, 22:30 IST
   

ಬೆಂಗಳೂರು: ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಸವಾಲಾಗಿರುವ ರೈಲ್ವೆ ಹಳಿಗೆ ಅಡ್ಡಲಾಗಿ ಶುಕ್ರವಾರ ಅಳವಡಿಕೆಯಾಗಬೇಕಿದ್ದ ವೆಬ್‌ ಗರ್ಡರ್ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಮುಂದೂಡಿದೆ.

65 ಮೀಟರ್ ಉದ್ದದ ವೆಬ್ ಗರ್ಡರ್ ಇದಾಗಿದ್ದು, ಬೆಂಗಳೂರು ಮೆಟ್ರೊ ರೈಲು ಮಾರ್ಗದಲ್ಲಿ ಅಳವಡಿಕೆ ಆಗುತ್ತಿರುವ ಅತಿ ಉದ್ದದ ವೆಬ್ ಗರ್ಡರ್ ಇದಾಗಿದೆ. ವೆಬ್ ಗರ್ಡರ್ ಅಳವಡಿಕೆ ಕಾಮಗಾರಿಯನ್ನು ಶುಕ್ರವಾರ ನಡೆಸಲು ಉದ್ದೇಶಿಸಲಾಗಿತ್ತು. ಅಟ್ಟಣಿಗೆ ಸೇರಿದಂತೆ ಪೂರ್ವ ಸಿದ್ಧತಾ ಕಾರ್ಯ ಇನ್ನೂ ಬಾಕಿ ಇರುವುದರಿಂದ ಕಾಮಗಾರಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.

ರೈಲ್ವೆ ಮಾರ್ಗ ಮತ್ತು ರಸ್ತೆ ಮೇಲ್ಸೇತುವೆ ಮೇಲೆ ಈ ಗರ್ಡರ್ ಅಳವಡಿಕೆಯಾಗಬೇಕಿದ್ದು, ಸುರಕ್ಷತೆ ಮುಖ್ಯವಾಗುತ್ತದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಂಡ ಬಳಿಕವೇ ವೆಬ್ ಗರ್ಡರ್ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಬೆನ್ನಿಗಾನಹಳ್ಳಿ ಬಳಿ ನೀಲಿ(ವಿಮಾನ ನಿಲ್ದಾಣ ಮಾರ್ಗ), ನೇರಳೆ ಮಾರ್ಗಗಳೆರಡೂ ಹಾದು ಹೋಗಲು ಪಿಲ್ಲರ್‌ಗಳ ಮೇಲೆ ಕಬ್ಬಿಣದ ಗರ್ಡರ್ ಅಳವಡಿಕೆ ಮಾಡಲಾಗಿದೆ. ಅವುಗಳ ಮೇಲೆ ರೈಲು ಮಾರ್ಗಗಳನ್ನು ನಿರ್ಮಿಸಬೇಕಿದೆ. ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ನಡುವಿನ ರೈಲು ಮಾರ್ಗಕ್ಕೆ ಇದು ಸವಾಲಿನ ಕೆಲಸವಾಗಿದೆ. ಆದ್ದರಿಂದಲೇ ಮೊದಲ ಹಂತದಲ್ಲಿ ಮಾರ್ಚ್ ವೇಳೆಗೆ ವೈಟ್‌ಫೀಲ್ಡ್‌ನಿಂದ ಕೆ.ಆರ್‌.ಪುರ ತನಕ ಮಾತ್ರ ಮೆಟ್ರೊ ರೈಲು ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಆಲೋಚನೆ ನಡೆಸಿದೆ. ಕೆ.ಆರ್.ಪುರದಿಂದ ವೈಟ್‌ಫೀಲ್ಡ್ ತನಕದ ಮಾರ್ಗ 2023ರ ಜೂನ್ ವೇಳೆಗೆ ಸಾರ್ವಜನಿಕ ಪ್ರಯಾಣಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಮೆಟ್ರೊ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನವೆಂಬರ್‌ನಲ್ಲಿ 1.60 ಕೋಟಿ ಜನ ಪ್ರಯಾಣ ಮಾಡಿದ್ದಾರೆ.

ನವೆಂಬರ್ 19ರಂದು ಒಂದೇ ದಿನ 6.06 ಲಕ್ಷ ಜನ ಪ್ರಯಾಣಿಸಿದ್ದು, ನವೆಂಬರ್‌ನಲ್ಲಿ ₹37.39 ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.