ADVERTISEMENT

ರೀಚ್‌ 4ಬಿ: ನವೆಂಬರ್‌ಗೆ ವಾಣಿಜ್ಯ ಸಂಚಾರ ಅನುಮಾನ

ನಮ್ಮ ಮೆಟ್ರೊ: ಯಲಚೇನಹಳ್ಳಿ–ಅಂಜನಾಪುರ ವಿಸ್ತರಿಸಿದ ಮಾರ್ಗ

ಗುರು ಪಿ.ಎಸ್‌
Published 9 ಅಕ್ಟೋಬರ್ 2020, 6:41 IST
Last Updated 9 ಅಕ್ಟೋಬರ್ 2020, 6:41 IST
ತಲಘಟ್ಟಪುರ ಮೆಟ್ರೊ ನಿಲ್ದಾಣದೊಳಗಿನ ಕಾಮಗಾರಿ ನೋಟ ಪ್ರಜಾವಾಣಿ ಚಿತ್ರ– ಅನೂಪ್‌ ರಾಘ್ ಟಿ 
ತಲಘಟ್ಟಪುರ ಮೆಟ್ರೊ ನಿಲ್ದಾಣದೊಳಗಿನ ಕಾಮಗಾರಿ ನೋಟ ಪ್ರಜಾವಾಣಿ ಚಿತ್ರ– ಅನೂಪ್‌ ರಾಘ್ ಟಿ    

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿಸಿದ ಮಾರ್ಗದಲ್ಲಿ ಮೆಟ್ರೊ ರೈಲುಗಳ ಪರೀಕ್ಷಾರ್ಥ ಸಂಚಾರ ಆರಂಭವಾಗಿದ್ದರೂ, ನವೆಂಬರ್‌ 1ಕ್ಕೆ ವಾಣಿಜ್ಯ ಸಂಚಾರ ಪ್ರಾರಂಭವಾಗುವುದು ಅನುಮಾನ.

ಪರಿಷ್ಕೃತ ಗಡುವಿನಂತೆ ನ.1ರ ವೇಳೆಗೆ ಈ ಮಾರ್ಗದಲ್ಲಿ ರೈಲುಗಳ ಸಾರ್ವಜನಿಕ ಸಂಚಾರ ಆರಂಭವಾಗುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿತ್ತು.

ಈ ಮಾರ್ಗದ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ ಹಾಗೂ ವಜ್ರಹಳ್ಳಿ ನಿಲ್ದಾಣಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.ನಿಲ್ದಾಣದೊಳಗೆ ಪ್ಲಾಟ್‌ಫಾರಂ, ಟಿಕೆಟ್‌ ಕೌಂಟರ್, ಗ್ರಾಹಕ ಸೇವಾ ಕೇಂದ್ರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ, ತಲಘಟ್ಟಪುರ, ಅಂಜನಾಪುರ ನಿಲ್ದಾಣದೊಳಗೆ ಟಿಕೆಟ್‌ ಕೌಂಟರ್, ಗ್ರಾಹಕ ಸೇವಾ ಕೇಂದ್ರಗಳ ನಿರ್ಮಾಣ ಪ್ರಾರಂಭವಾಗಿಲ್ಲ.

ADVERTISEMENT

‘ನ.1ರೊಳಗೆ ಎಲ್ಲ ಕಾರ್ಯ ಮುಗಿಯಬೇಕು ಎಂದು ಗಡುವು ನೀಡಲಾಗಿತ್ತು. ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಆದರೂ, ಇನ್ನು ಒಂದು ತಿಂಗಳಲ್ಲಿ ಅಂಜನಾಪುರದವರೆಗೆ ವಾಣಿಜ್ಯ ಸೇವೆ ಪ್ರಾರಂಭಿಸಲು ಸಾಧ್ಯವಾಗದು. ಸಾಕಷ್ಟು ಕೆಲಸ ಬಾಕಿ ಇದೆ’ ಎಂದು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯೋತ್ಸವದ ವೇಳೆಗೇ ಸಂಚಾರ ಆರಂಭಿಸಬಹುದು ಎಂದಾದರೆ, ಯಲಚೇನಹಳ್ಳಿಯಿಂದ ನಂತರದ ಮೊದಲ ಮೂರು ನಿಲ್ದಾಣದವರೆಗೆ ಸೇವೆ ನೀಡಬಹುದಷ್ಟೇ. ಅಂಜನಾಪುರದವರೆಗೆ ಸೇವೆ ಪ್ರಾರಂಭವಾಗಲು ಜನವರಿಯವರೆಗೆ ಕಾಯಬೇಕಾಗಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.