ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗದ ಸಂಚಾರಕ್ಕೆ ನಾಲ್ಕನೇ ರೈಲು ಆಗಸ್ಟ್ ಮೊದಲ ವಾರದಲ್ಲಿ ಪೂರೈಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದಲ್ಲಿ ಚಾಲಕರಹಿತ ಚಾಲನಾ ಎಂಜಿನ್ ಹೊಂದಿರುವ ಮೆಟ್ರೊ ರೈಲುಗಳು ಸಂಚರಿಸಲಿವೆ. ಪ್ರೊಟೊಟೈಪ್ (ಮೂಲ ಮಾದರಿ) ಮೊದಲ ರೈಲು 2024ರ ಏಪ್ರಿಲ್‌ನಲ್ಲೇ ಬಂದಿತ್ತು. 2025ರ ಜನವರಿಯಲ್ಲಿ ಪ್ರೊಟೊಟೈಪ್ ಎರಡನೇ ರೈಲು, ಮೇ ತಿಂಗಳಲ್ಲಿ ಮೂರನೇ ರೈಲು ಪೂರೈಕೆಯಾಗಿತ್ತು.
ಆರ್.ವಿ.ರಸ್ತೆ– ಬೊಮ್ಮಸಂದ್ರ ನಡುವಿನ 19.15 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರ(ಸಿಎಂಆರ್‌ಎಸ್) ಅಧಿಕಾರಿಗಳ ತಂಡ ಪರೀಕ್ಷೆಗಳನ್ನು ಮಂಗಳವಾರ ಆರಂಭಿಸಿದೆ.
ಜುಲೈ 25ಕ್ಕೆ ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ. ಸಿಎಂಆರ್‌ಎಸ್ ತಂಡ ಪ್ರಾಥಮಿಕ ಹಂತದ ಪರೀಕ್ಷೆಗಳು ಪೂರ್ಣಗೊಳಿಸಿದ ಬಳಿಕ ರೈಲು ಸಂಚರಿಸಬಹುದಾದ ಗರಿಷ್ಠ ವೇಗ, ಕನಿಷ್ಠ ವೇಗ, ತಡೆಗಳು ಉಂಟಾದಾಗ ಕೈಗೊಳ್ಳಬೇಕಾದ ಕ್ರಮಗಳ ಪರಿಶೀಲನೆ, ಎಷ್ಟು ಭಾರ ಹೊತ್ತೊಯ್ಯಬಹುದು ಎಂದು ಪರೀಕ್ಷಿಸಲು ಸಿಮೆಂಟ್ ಚೀಲಗಳನ್ನು ಇಟ್ಟು ರೈಲು ಪರೀಕ್ಷಾ ಸಂಚಾರಗಳು ನಡೆಯಲಿವೆ.
ದೋಷಗಳು ಕಂಡು ಬಂದರೆ ಪರಿಹರಿಸಲು ಪರೀಕ್ಷಾ ತಂಡ ಸೂಚಿಸಲಿದೆ. ಯಾವುದೇ ಲೋಪಗಳಿಲ್ಲದೇ ಇದ್ದರೆ ರೈಲು ಸಂಚಾರಕ್ಕೆ ಅನುಮತಿ ನೀಡಲು ಶಿಫಾರಸು ಮಾಡಲಿದೆ. ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂದರ್ಭಕ್ಕೆ ಹಳದಿ ಮಾರ್ಗದಲ್ಲಿ ರೈಲು ಓಡಾಡುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.