ನಮ್ಮ ಮೆಟ್ರೊ ಹಳದಿ ಮಾರ್ಗ ಪ್ರಾರಂಭಿಸಲು ಆಗ್ರಹಿಸಿ ಬಿಜೆಪಿ ಶಾಸಕರಾದ ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ಸಿ.ಕೆ. ರಾಮಮೂರ್ತಿ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸಂಚಾರ ಇನ್ನೂ ಆರಂಭವಾಗದೇ ಇರುವುದನ್ನು ವಿರೋಧಿಸಿ ಬಿಜೆಪಿ ಸಂಸದರು, ಶಾಸಕರು ಪ್ರತಿಭಟನೆ ಹಮ್ಮಿಕೊಂಡರೆ, ವಿಳಂಬಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಕೆಲವು ವರ್ಷಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದರೂ ಎರಡೂ ಪಕ್ಷಗಳು ಮೌನವಾಗಿದ್ದು, ಇನ್ನು ಒಂದೆರಡು ತಿಂಗಳಲ್ಲಿ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಗೊಳ್ಳುವ ಮುನ್ಸೂಚನೆ ದೊರೆತ ಕೂಡಲೇ ಪ್ರತಿಭಟನೆಗೆ ಇಳಿದಿರುವುದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಪ್ರತಿಭಟನೆ: ‘ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಆಗಸ್ಟ್‌ನಲ್ಲಿ ರೈಲು ಸಂಚರಿಸಲಿದೆ’ ಎಂದು ಬಿಎಂಆರ್‌ಸಿಎಲ್ ನಿಗದಿಪಡಿಸಿಕೊಂಡಿರುವ ಹೊಸ ಗಡುವನ್ನು ಮೀರಿದರೆ ಹೋರಾಟ ತೀವ್ರಗೊಳಿಸಲಾಗುವುದು. ಮೆಟ್ರೊ ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಎಚ್ಚರಿಸಿದರು.
‘ರಸ್ತೆಯಲ್ಲಿ ಖಾಸಗಿ ವಾಹನಗಳು ಕಡಿಮೆಯಾದರೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಮಾತ್ರ ಬೆಂಗಳೂರಿನ ಸಂಚಾರ ಬಿಕ್ಕಟ್ಟನ್ನು ಪರಿಹರಿಸಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಬಿಎಂಆರ್‌ಸಿಎಲ್ ದರ ನಿಗದಿ ಸಮಿತಿಯ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರೂ ಇಲ್ಲಿವರೆಗೆ ಬಿಡುಗಡೆ ಮಾಡಿಲ್ಲ. ಬೆಂಗಳೂರು ಮೆಟ್ರೊ ಪ್ರಯಾಣದರವು ದೇಶದಲ್ಲಿಯೇ ದುಬಾರಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಮಾತನಾಡಿ, ‘ಆಗಸ್ಟ್ 15ರ ಒಳಗೆ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಗೊಳ್ಳಲಿದೆ. ಆರಂಭದಲ್ಲಿ ಮೂರು ರೈಲುಗಳು ಸಂಚರಿಸಲಿವೆ. ರೈಲುಗಳ ಪೂರೈಕೆಯಾದಾಗ ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಿಸಲಾಗುವುದು’ ಎಂದು ಭರವಸೆ ನೀಡಿದರು.
ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಂ. ಕೃಷ್ಣಪ್ಪ,ಎಲ್.ಎ. ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್, ಸಿ.ಕೆ. ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ ಮತ್ತು ಬಿಜೆಪಿ ಸದಸ್ಯರು ಭಾಗವಹಿಸಿದ್ದರು.
‘ನಮ್ಮ ಮೆಟ್ರೊ ಇತರ ಮಾರ್ಗಗಳ ಕಾರ್ಯಾಚರಣೆ ಮತ್ತು ನಿರ್ಮಾಣದಲ್ಲಿ ಕಾರ್ಯವೂ ವಿಳಂಬವಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಯಿತು.
ಜಯನಗರದ ರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಬೊಮ್ಮನಹಳ್ಳಿಗೆ ಸಂಪರ್ಕಿಸುವ ಹಳದಿ ಮಾರ್ಗ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗ ಆಮೆಗತಿಯಲ್ಲಿ ಸಾಗಲು ಕೇಂದ್ರ ಸರ್ಕಾರದ ವಿಳಂಬ ನೀತಿಯೇ ಕಾರಣ ಎಂದು ಆರೋಪಿಸಿ ಶಾಂತಿನಗರದ ಬಿಎಂಆರ್‌ಸಿಎಲ್ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಮೆಟ್ರೊ ರೈಲು ಯೋಜನೆಗಳು ನಗರದ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾಗಿವೆ. ಕೇಂದ್ರ ಸರ್ಕಾರದ ವಿಳಂಬ ನೀತಿಯಿಂದಾಗಿ ಮತ್ತು ತಂತ್ರಜ್ಞಾನದ ಸಮಸ್ಯೆಯಿಂದಾಗಿ ಕಾಮಗಾರಿಗಳು ದಶಕ ಕಳೆದರೂ ಪೂರ್ಣಗೊಂಡಿಲ್ಲ. ಸಂಚಾರ ಆರಂಭವಾಗಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು. ಮೆಟ್ರೊ ರೈಲುಗಳಲ್ಲಿ ಬಳಕೆಯಾಗುವ ಸಿಗ್ನಲ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿವೆ. ಕೇಂದ್ರ ಸರ್ಕಾರದ ಅನುಮತಿ ತಡವಾಗಿದ್ದರಿಂದ ರೈಲು ಕೋಚ್‌ಗಳ ತಯಾರಿ ಮತ್ತು ಸರಬರಾಜು ತಡವಾಗಿದೆ. ಯೋಜನೆ ಟೆಂಡರ್ ಹಾಗೂ ಇತರೇ ಸಮಸ್ಯೆಗಳೂ ಎದುರಾಗಿವೆ. ಯೋಜನೆಯ ದುರ್ಬಲ ನಿರ್ವಹಣೆ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರಿಗೆ ನಿರಾಶೆ ಉಂಟಾಗಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರವು ಬಾಕಿ ಇರುವ ಎಲ್ಲ ತಾಂತ್ರಿಕ ಆಡಳಿತಾತ್ಮಕ ಅನುಮತಿಗಳನ್ನು ಶೀಘ್ರದಲ್ಲಿ ನೀಡಬೇಕು. ಮೆಟ್ರೊ ಕೋಚ್ ಪೂರೈಸಲು ಕ್ರಮ ಕೈಗೊಳ್ಳಬೇಕು. ಯೋಜನೆಗೆ ಅಗತ್ಯವಿರುವ ಅನುದಾನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಯನಗರ ವಿಧಾನಸಭಾ ಕ್ಷೇತ್ರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್. ನಾಗರಾಜು ಮಾಜಿ ಮೇಯರ್ ಮಂಜುನಾಥ ರೆಡ್ಡಿ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಕೆ.ವಿ. ಗೌತಮ್ ಪಾಲಿಕೆ ಮಾಜಿ ಸದಸ್ಯ ಸುದ್ದಗುಂಟೆ ಮಂಜುನಾಥ್ ಆಗ್ರಹಿಸಿದರು. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಮನವಿ ಸ್ವೀಕರಿಸಿದರು.
ಭ್ರಷ್ಟಾಚಾರ ಅಕ್ರಮ ಕಾರಣ ಹಳದಿ ಮಾರ್ಗ ಮಾತ್ರವಲ್ಲ ನಮ್ಮ ಮೆಟ್ರೊದ ಎಲ್ಲ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಇಲ್ಲಿವರೆಗೆ ನೀಡಿದ ಗಡುವಿನೊಳಗೆ ಯಾವುದೇ ಮೆಟ್ರೊ ಸಂಚಾರವನ್ನು ಆರಂಭಿಸಿದ ಉದಾಹರಣೆಯೇ ಇಲ್ಲ. ಇದಕ್ಕೆ ಭ್ರಷ್ಟಾಚಾರ ಮತ್ತು ಅಕ್ರಮವೇ ಕಾರಣ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಆರೋಪಿಸಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷವಾದ ಬಿಜೆಪಿ ಕೆಸರೆರಚಾಟದಲ್ಲಿ ಮುಳುಗಿವೆ. ಮೆಟ್ರೊ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಅವ್ಯವಹಾರ ಮತ್ತು ಅಕ್ರಮಗಳು ನಡೆಯುತ್ತಿದೆ. ಇದೇ ರೀತಿ ಮುಂದುವರೆದರೆ ಪ್ರಸ್ತುತ ಯೋಜಿಸಿರುವ ಮತ್ತು ಕಾಮಗಾರಿ ಚಾಲ್ತಿಯಲ್ಲಿರುವ ಐದು ಮಾರ್ಗಗಳಲ್ಲಿ ಕಾಮಗಾರಿ ಮುಗಿದು ಕಾರ್ಯಾಚರಣೆ ಮುಗಿಸಲು ಎರಡು ದಶಕ ಸಾಲದು. ಈ ಬಗ್ಗೆ ಒಕ್ಕೂಟ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಆರ್‌ಎಸ್ ರಾಜ್ಯ ಕಾರ್ಯದರ್ಶಿ ಜೀವನ್ ಎಲ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.