
ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಫೆ.27ರಿಂದ 8ನೇ ರೈಲು ಸಂಚರಿಸಲಿದೆ. ಸದ್ಯ 10 ನಿಮಿಷಕ್ಕೊಂದು ರೈಲು ಸಂಚರಿಸುತ್ತಿದ್ದು, ಈ ಅವಧಿ 9 ನಿಮಿಷಕ್ಕೆ ಇಳಿಯಲಿದೆ.
ಪಶ್ಚಿಮ ಬಂಗಾಳದ ಟಿಟಾಗಡ್ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್‌ಎಸ್‌ಎಲ್) ಕಾರ್ಯಾಗಾರದಿಂದ ಜನವರಿ ಕೊನೇ ವಾರದಲ್ಲಿ ರವಾನೆಯಾಗಿದ್ದ ಎಂಟನೇ ರೈಲಿನ ಬೋಗಿಗಳು ಫೆಬ್ರುವರಿ ಮೊದಲ ವಾರದಲ್ಲಿ ಹೆಬ್ಬಗೋಡಿ ಮೆಟ್ರೊ ಡಿಪೊಗೆ ತಲುಪಿದ್ದವು. ಇನ್‌ಸ್ಪೆಕ್ಷನ್ ಬೇ ಲೈನ್‌ನಲ್ಲಿ ಆರಂಭಿಕ ಪರೀಕ್ಷೆಗಳು ನಡೆದಿದ್ದವು. ಬಳಿಕ ರಾತ್ರಿ ವೇಳೆ ಪರೀಕ್ಷಾರ್ಥ ಸಂಚಾರ ನಡೆಸಲಾಗಿತ್ತು.
19.15 ಕಿ.ಮೀ. ದೂರದ ಆರ್.ವಿ. ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವೆ ಆಗಸ್ಟ್ 11ಕ್ಕೆ ಆರಂಭವಾಗಿರುವ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸದ್ಯ ಏಳು ರೈಲುಗಳು ಸಂಚರಿಸುತ್ತಿದ್ದು, ದಟ್ಟಣೆ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಂದು ಟ್ರಿಪ್‌ನಂತೆ ಸಂಚರಿಸುತ್ತಿವೆ.
ದಟ್ಟಣೆ ಅಲ್ಲದ ಅವಧಿಯಲ್ಲಿ 18 ನಿಮಿಷಗಳಿಗೊಂದು ರೈಲು ಸಂಚರಿಸುತ್ತಿತ್ತು. ಇನ್ನು ಮುಂದೆ 14 ನಿಮಿಷಕ್ಕೊಂದು ಟ್ರಿಪ್ ಇರಲಿದೆ. ಭಾನುವಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.