ADVERTISEMENT

ಸಕ್ರಿಯ ವಾರ್ಡ್‌ ಸಮಿತಿಗಳ ಬೆನ್ನು ತಟ್ಟಿದ ಜನತೆ

52 ಪಾಲಿಕೆ ಸದಸ್ಯರಿಗೆ ‘ನಮ್ಮ ಸಮಿತಿ ಪುರಸ್ಕಾರ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 19:54 IST
Last Updated 14 ಜುಲೈ 2019, 19:54 IST
ಕಾರ್ಯಕ್ರಮದಲ್ಲಿ ‘ಕಾರ್ಪೊರೇಟರ್ ನಂ.1 – ನಮ್ಮ ಸಮಿತಿ ಪುರಸ್ಕಾರ’ ಪಡೆದ ಬಿಬಿಎಂಪಿ ಸದಸ್ಯರೊಂದಿಗೆ ಪದ್ಮನಾಭ ರೆಡ್ಡಿ (ಕುಳಿತವರಲ್ಲಿ ಎಡದಿಂದ ಮೂರನೆಯವರು), ಗಂಗಾಂಬಿಕೆ, ಸಂತೋಷ್ ಹೆಗ್ಡೆ ಇದ್ದಾರೆ-ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ‘ಕಾರ್ಪೊರೇಟರ್ ನಂ.1 – ನಮ್ಮ ಸಮಿತಿ ಪುರಸ್ಕಾರ’ ಪಡೆದ ಬಿಬಿಎಂಪಿ ಸದಸ್ಯರೊಂದಿಗೆ ಪದ್ಮನಾಭ ರೆಡ್ಡಿ (ಕುಳಿತವರಲ್ಲಿ ಎಡದಿಂದ ಮೂರನೆಯವರು), ಗಂಗಾಂಬಿಕೆ, ಸಂತೋಷ್ ಹೆಗ್ಡೆ ಇದ್ದಾರೆ-ಪ್ರಜಾವಾಣಿ ಚಿತ್ರ   

ಬೆಂಗಳೂರು: ರಸ್ತೆ ಗುಂಡಿ ಮುಚ್ಚಿಸಿಲ್ಲ, ಕಟ್ಟಿಕೊಂಡ ಚರಂಡಿ ದುರಸ್ತಿಪಡಿಸಿಲ್ಲ, ಬೀದಿದೀ‍ಪ ಸರಿಪಡಿಸಿಲ್ಲ...ಹೀಗೆ ಒಂದಿಲ್ಲೊಂದು ಕಾರಣಕ್ಕೆ ಸದಾ ಟೀಕೆಗೊಳಗಾಗುವ ಪಾಲಿಕೆ ಸದಸ್ಯರ ಮೊಗದಲ್ಲಿ ಮಂದಹಾಸ ಮೂಡಿತ್ತು. ಮಾಡಿದ ಕೆಲಸವನ್ನೂ ಜನ ಗುರುತಿಸಿದರಲ್ಲ ಎಂಬ ಹೆಮ್ಮೆಯ ಭಾವ ಅವರ ಮುಖದಲ್ಲಿ ಕಂಗೊಳಿಸುತ್ತಿತ್ತು.

ಸಿಟಿಜನ್ಸ್‌ ಫಾರ್‌ ಬೆಂಗಳೂರು ವತಿಯಿಂದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಕಾರ್ಪೊರೇಟರ್ ನಂ.1’ ನಮ್ಮ ಸಮಿತಿ ಪುರಸ್ಕಾರ’ ಪ್ರದಾನ ಕಾರ್ಯಕ್ರಮ ಕಾರ್ಪೊರೇಟರ್‌ಗಳಷ್ಟೇ ಅಲ್ಲ, ವಾರ್ಡ್‌ನ ಬೇಕು ಬೇಡಗಳ ಕುರಿತು ಸ್ಪಂದಿಸುವ ಜನರ ಹಾಗೂ ಸಾಮಾಜಿಕ ಕಾರ್ಯಕರ್ತರ ಪಾಲಿಗೂ ಸಂಭ್ರಮವನ್ನು ಕಟ್ಟಿಕೊಟ್ಟಿತು.

ಪ್ರತಿ ತಿಂಗಳ ಮೊದಲ ಶನಿವಾರವೇ ವಾರ್ಡ್‌ ಸಮಿತಿ ಸಭೆ ಹಮ್ಮಿಕೊಳ್ಳಬೇಕು ಎಂದು ಪಾಲಿಕೆಯು 2018ರ ಡಿಸೆಂಬರ್‌ನಲ್ಲಿ ನಿರ್ಣಯ ಕೈಗೊಂಡಿತ್ತು. ಚಾಚೂತಪ್ಪದೇ ಸಭೆಗಳನ್ನು ನಡೆಸಿರುವ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಜನರ ಜೊತೆ ಚರ್ಚಿಸಿ, ಬಗೆಹರಿಸಲು ಕ್ರಮಕೈಗೊಂಡ ‌ಪಾಲಿಕೆಯ 52 ಸದಸ್ಯರನ್ನುಜನಾಭಿಪ್ರಾಯದ ಆಧಾರದಲ್ಲಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಇವರಲ್ಲಿ 27 ಮಂದಿ ಪುರಸ್ಕಾರ ಸ್ವೀಕರಿಸಿದರು. ಕಾರ್ಪೊರೇಟರ್‌ಗಳಿಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಮೈಸೂರು ಪೇಟಾ ತೊಡಿಸಿದರೆ, ಒಂದಿಲ್ಲೊಂದು ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಸಾಮಾಜಿಕ ಕಾರ್ಯಕರ್ತರು ಪ್ರಶಸ್ತಿ ಫಲಕ ಪ್ರದಾನ ಮಾಡಿದರು.

ADVERTISEMENT

ವಾರ್ಡ್‌ ಸಮಿತಿಯ ಮಹತ್ವ ತಿಳಿಸಿದ ಸಂತೋಷ್‌ ಹೆಗ್ಡೆ, ‘ನಿರ್ದಿಷ್ಟ ಬೀದಿಯ ಸಮಸ್ಯೆಗಳ ವಾಸ್ತವದ ಬಗ್ಗೆ ಸಂಸದ, ಶಾಸಕರಿಗಿಂತ ಹೆಚ್ಚಾಗಿ ಗೊತ್ತಿರುವುದು ಸ್ಥಳೀಯ ನಿವಾಸಿಗಳಿಗೆ. ಪ್ರತಿಯೊಬ್ಬ ನಾಗರಿಕನೂ ಪ‍್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸುವ ಅವಕಾಶವನ್ನು ವಾರ್ಡ್‌ ಸಮಿತಿ ಒದಗಿಸುತ್ತದೆ. ಅದನ್ನು ಬಳಸಿಕೊಳ್ಳಬೇಕು’ ಎಂದರು.

ಮೇಯರ್‌ ಗಂಗಾಂಬಿಕೆ, ‘ಪಾಲಿಕೆ ಆಡಳಿತದಲ್ಲಿ ಪಾರದರ್ಶಕತೆ ತರಲು ವಾರ್ಡ್‌ ಸಮಿತಿ ಸಹಕಾರಿ. ಜನಪ್ರತಿನಿಧಿಗಳುಜನರೊಂದಿಗೆ ಒಡನಾಟ ಇಟ್ಟುಕೊಳ್ಳಲು ಇವು ಉತ್ತಮ ವೇದಿಕೆ’ ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ಸರ್ಕಾರವು ಪಾಲಿಕೆಗೆ ಶೇ 50ರಷ್ಟು ಅಧಿಕಾರವನ್ನು ಬಿಟ್ಟುಕೊಡಬೇಕು. ಆದರೆ, ಈ ಆಶಯ ಇನ್ನೂ ಜಾರಿಯಾಗಿಲ್ಲ. ಈ ಬಗ್ಗೆ ಸಂತೋಷ್‌ ಹೆಗ್ಡೆ ಅವರಂತಹ ಕಾನೂನು ತಜ್ಞರು ಸರ್ಕಾರದ ಮೇಲೆ ಪ್ರಭಾವ ಬೀರಬೇಕು’ ಎಂದು ಕೋರಿದರು.

ರಾಜ್ಯ ರಾಜಕೀಯ ಬೆಳವಣಿಗೆ: ನ್ಯಾ.ಹೆಗ್ಡೆ ಕಳವಳ

ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾ.ಸಂತೋಷ್‌ ಹೆಗ್ಡೆ, ‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಜನಪ್ರತಿನಿಧಿಗಳು ಜನರ ಸೇವಕರೇ ಹೊರತು ಮಾಲೀಕರಲ್ಲ. ತಮಗೆ ಸಿಕ್ಕಿದ ಅಧಿಕಾರವನ್ನು ಜನರ ಸೇವೆಗೆ ಬಳಸಬೇಕೇ ಹೊರತು, ದುರ್ಬಳಕೆ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

**

ಅಮೆರಿಕದ ಅಧ್ಯಕ್ಷರ ಬಗ್ಗೆ ತಿಳಿದಿರುವ ಜನರಿಗೆ ಸ್ಥಳೀಯ ಕಾರ್ಪೊರೇಟರ್‌ ಮಾಡಿರುವ ಕೆಲಸದ ಬಗ್ಗೆ ತಿಳಿಯದಿದ್ದರೆ ಹೇಗೆ. ಜನರು ಪ್ರಧಾನಿ, ಮುಖ್ಯಮಂತ್ರಿ ಬಗ್ಗೆ ಮಾತನಾಡುವ ಬದಲು ಕಾರ್ಪೊರೇಟರ್‌ ಬಗ್ಗೆ, ಮೇಯರ್‌ ಬಗ್ಗೆ ಹೆಚ್ಚು ಚರ್ಚಿಸುವಂತಾಗಬೇಕು
–ಶ್ರೀನಿವಾಸ ಅಲವಿಲ್ಲಿ, ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಹಸಂಸ್ಥಾಪಕ

**

ವಾರ್ಡ್‌ ಸಮಿತಿ ಸಭೆಗಳನ್ನು ನಡೆಸುವುದರ ಜೊತೆಗೆ, ತಿಂಗಳಿಗೊಮ್ಮೆ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸುವ ಪರಿಪಾಠ ಬೆಳೆಸಿಕೊಂಡಿದ್ದೇನೆ. ನಮ್ಮ ಕಾರ್ಯಗಳನ್ನು ಗುರುತಿಸಿದ್ದರಿಂದ ಇನ್ನಷ್ಟು ಹುರುಪು ಬಂದಿದೆ
–ಎಂ.ಮಾಲತಿ, ಶಾಕಾಂಬರಿನಗರ ವಾರ್ಡ್‌ನ ಪಾಲಿಕೆ ಸದಸ್ಯೆ

**

ವಾರ್ಡ್ ಸಮಿತಿ ಸಭೆಗಳನ್ನು ಚೆನ್ನಾಗಿ ನಡೆಸಿರುವ ಪಾಲಿಕೆ ಸದಸ್ಯರನ್ನು ಗುರುತಿಸಿರುವುದು ಒಳ್ಳೆಯ ಕೆಲಸ. ಇತರ ಕಾರ್ಪೊರೇಟರ್‌ಗಳಿಗೂ ಇದರಿಂದ ಪ್ರೇರಣೆ ಸಿಗಲಿದೆ.
ಕೆ.ಎನ್‌.ಲಕ್ಷ್ಮೀ ನಟರಾಜ್‌, ಜೆ.ಪಿ.ನಗರ ವಾರ್ಡ್‌ನ ಪಾಲಿಕೆ ಸದಸ್ಯೆ

**

ಜನರ ಸಲಹೆ ಪಡೆದು ಸಮಸ್ಯೆ ಬಗೆಹರಿಸುವುದಕ್ಕೆ ಹಾಗೂ ಮತದಾರರ ಜೊತೆ ಉತ್ತಮ ನಂಟು ಬೆಳೆಸುವುದಕ್ಕೆ ವಾರ್ಡ್‌ ಸಮಿತಿ ಉತ್ತಮ ವೇದಿಕೆ. ವಾರ್ಡ್ ಸಮಿತಿ ಸಭೆ ನಡೆಸುವ ಕಾರ್ಪೊರೇಟರ್‌ಗಳನ್ನು ಗುರುತಿಸಿದ್ದರಿಂದ ಹೊಣೆ ಮತ್ತಷ್ಟು ಹೆಚ್ಚಿದೆ
- ಎಂ.ಆಂಜನಪ್ಪ, ಬೇಗೂರು ವಾರ್ಡ್‌ನ ಪಾಲಿಕೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.