ಯಲಹಂಕ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸಹಯೋಗದೊಂದಿಗೆ ‘ನಮ್ಮ ಸುರಕ್ಷಾ’ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ‘ಹ್ಯಾಕ್‌ಥಾನ್ʼ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಲ್ಲಿ ಕೋಡಿಂಗ್ ಕೌಶಲಗಳನ್ನು ಚುರುಕುಗೊಳಿಸಲು, ನೈತಿಕ ಹ್ಯಾಕಿಂಗ್ ಅಗತ್ಯವಿರುವ ಯೋಜನೆಗಳಲ್ಲಿ ಕಾರ್ಯನಿರ್ವಹಿಸಲು ಮತ್ತು ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸೇರಿ ದೇಶದಾದ್ಯಂತ ವಿವಿಧ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪೊಲೀಸರು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಸಮಸ್ಯೆಗಳ ಕುರಿತ ವಿಷಯಗಳನ್ನು ನೀಡಿ, ಪರಿಹಾರಗಳನ್ನು ಕಂಡುಹಿಡಿಯಲು ಕಾಲಾವಕಾಶ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲು ಅವಕಾಶ ಕಲ್ಪಿಸಲಾಗಿತ್ತು.
ಪೊಲೀಸ್ ಮಹಾನಿರ್ದೇಶಕ ಲಾಭುರಾಮ್ ಅವರು, ಪೊಲೀಸ್ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಪ್ರಾಮುಖ್ಯ ಮತ್ತು ಕರ್ನಾಟಕ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಲು ಹಲವಾರು ತಾಂತ್ರಿಕ ಸಾಧನಗಳನ್ನು ಹೇಗೆ ಅವಲಂಬಿಸಿದ್ದಾರೆ ಎಂಬುದರ ಕುರಿತು ಮಾಹಿತಿ ನೀಡಿದರು.
ಯುವಸಮುದಾಯವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ವಿಜ್ಞಾನ ಹಾಗೂ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತಾವು ಪಡೆದಿರುವ ಜ್ಞಾನದೊಂದಿಗೆ ಪೊಲೀಸ್ ಇಲಾಖೆಗೆ ಸಹಾಯಮಾಡುವ ಮಹತ್ವವನ್ನು ತಿಳಿಸಿದರು.
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ವಿಜಯನ್ ಇಮ್ಯಾನುಯೆಲ್ ಮಾತನಾಡಿ, ಯುವಮನಸ್ಸುಗಳು ಸಮಾಜದಲ್ಲಿನ ಸಮಸ್ಯೆಗಳ ಕುರಿತು ಯೋಚಿಸಿ, ಕಾರ್ಯನಿರ್ವಹಿಸುವುದ ರ ಜೊತೆಗೆ ಪರಿಹಾರ ನೀಡಲು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಹ ಕುಲಪತಿ ಸಮೀರ್ ಖಾನ್, ಕುಲಸಚಿವರಾದ ಸಮೀನ ನೂರ್ ಅಹ್ಮದ್ ಪನಾಲಿ, ದೊಡ್ಡಬಳ್ಳಾಪುರ ವೃತ್ತದ ಡಿವೈಎಸ್‌ಪಿ ರವಿ.ಪಿ, ರಾಜಾನುಕುಂಟೆ ಠಾಣೆಯ ಇನ್ಸ್‌ಪೆಕ್ಟರ್ ಕೆ.ಎಚ್.ದಿಲೀಪ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.