ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿ ಕಂಠೀರವ ಸ್ಟುಡಿಯೊ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಂಡಿದ್ದ ಕೆಳಸೇತುವೆ ಕಾಮಗಾರಿ ಸದ್ಯದಲ್ಲಿ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಪೂರ್ಣಗೊಳ್ಳದ ಕಾರಣ ಇಲ್ಲಿನ ರಸ್ತೆಗಳಲ್ಲಿ ವಾಹನದಟ್ಟಣೆ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ನಂದಿನಿ ಲೇಔಟ್ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶದ ನಡುವೆ ಸಿಗ್ನಲ್‌ರಹಿತ ಸಂಚಾರ ವ್ಯವಸ್ಥೆ ರೂಪಿಸುವ ಸಲುವಾಗಿ 2013ರಲ್ಲಿ ಈ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಭೂಸ್ವಾಧೀನ ಕುರಿತ ಗೊಂದಲಗಳಿಂದಾಗಿ ಆರಂಭದಲ್ಲೇ ಕಾಮಗಾರಿಗೆ ಸಮಸ್ಯೆ ಎದುರಾಗಿತ್ತು. 70ಕ್ಕೂ ಹೆಚ್ಚು ಆಸ್ತಿಗಳಿಗೆ ಪರಿಹಾರದಶೇ 50ರಷ್ಟು ಹಣವನ್ನುಬಿಡಿಎ ಪಾವತಿಸಿದೆ. ಅಂಡರ್‌ಪಾಸ್ ಕಾಮಗಾರಿ ಬಹಳ ದಿನಗಳಿಂದ ಬಹುತೇಕ ಸ್ಥಗಿತವಾಗಿದೆ. ಇಲ್ಲಿ ಗಿಡಗಂಟಿಗಳು ಬೆಳೆದಿವೆ. ಕಸವೂ ರಾಶಿ ಬಿದ್ದಿದೆ.
ಸಣ್ಣ ಪ್ರಮಾಣದ ಮಳೆ ಸುರಿದರೂ ಇಲ್ಲಿನ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ವಾಹನ ಸವಾರರು ಮತ್ತಷ್ಟು ಕಿರಿಕಿರಿ ಎದುರಿಸುವಂತಾಗಿದೆ. ಕತ್ತಲಾಗುತ್ತಿದ್ದಂತೆಯೇ ಕಾಮಗಾರಿ ನಡೆಯುತ್ತಿರುವ ಸ್ಥಳವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಪ್ರಾಧಿಕಾರವನ್ನು ಒತ್ತಾಯಿಸಿದರು.
‘ಈ ಪ್ರದೇಶವು ಬೃಹತ್ ಕೈಗಾರಿಕೆಗಳು ಹಾಗೂ ಉದ್ದಿಮೆಗಳ ಪ್ರಮುಖ ಕೇಂದ್ರವಾಗಿದೆ. ಇಲ್ಲಿನ ರಸ್ತೆ ಕಿರಿದಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಕಾಮಗಾರಿ ಆರಂಭವಾದಾಗಿನಿಂದ ಪರಿಸ್ಥಿತಿ ಮತ್ತಷ್ಟು ಉಲ್ಭಣವಾಗಿದೆ. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಹಲವು ಬಾರಿ ಭೇಟಿ ನೀಡಿ ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ನೀಡಿದರು. ಕಾಮಗಾರಿ ಮಾತ್ರ ಯಾವುದೇ ಪ್ರಗತಿ ಕಂಡಿಲ್ಲ. ಈಗಲೂ ಆಮೆಗತಿಯಲ್ಲೇ ಸಾಗುತ್ತಿದೆ’ ಎಂದು ಸ್ಥಳೀಯ ಟೀ ಅಂಗಡಿ ಮಾಲೀಕ ರಮೇಶ್ ಬಾಬು ತಿಳಿಸಿದರು.
‘ಕೆಳಸೇತುವೆ ಕಾಮಗಾರಿಗೆ ತಗಲುವ ವೆಚ್ಚ ₹30 ಕೋಟಿ. ಆದರೆ, ಇಲ್ಲಿವರೆಗೆ ಭೂಸ್ವಾಧೀನಕ್ಕೆ ₹130 ಕೋಟಿ ಪರಿಹಾರ ನೀಡಲಾಗಿದೆ. ಬಾಕಿ ಹಣದ ಬದಲು ಪರ್ಯಾಯವಾಗಿ ಬಿಡಿಎ ನಿವೇಶನ ಹಂಚಿಕೆ ಮಾಡುವಂತೆ ಶಾಸಕರು ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಯೋಜನೆ ಬಗ್ಗೆ ಪೂರ್ಣ ಮಾಹಿತಿ ಕೇಳಿದ್ದೇನೆ. ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಬಳಿಕ ಅಲ್ಲಿನ ಪರಿಸ್ಥಿತಿ ನೋಡಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದುಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸ್ಪಷ್ಟನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.