ADVERTISEMENT

ವಿದ್ಯಾರ್ಥಿ ತಲೆಗೆ ಹೊಡೆದು, ಅಕ್ಕನಿಗೆ ಜೀವ ಬೆದರಿಕೆ 

* ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ಘಟನೆ * ಪ್ರಾಂಶುಪಾಲ, ಇಬ್ಬರು ಶಿಕ್ಷಕರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:47 IST
Last Updated 20 ಡಿಸೆಂಬರ್ 2019, 19:47 IST

ಬೆಂಗಳೂರು: ಏಳನೇ ತರಗತಿ ವಿದ್ಯಾರ್ಥಿಯ ತಲೆಗೆ ರಕ್ತ ಬರುವಂತೆ ಹೊಡೆದು, ಆ ಸಂಗತಿಯನ್ನು ಯಾರಿಗೂ ಹೇಳದಂತೆ ಆತನ ಅಕ್ಕನಿಗೆ ಜೀವಬೆದರಿಕೆಯೊಡ್ಡಿದ್ದ ಆರೋಪದಡಿ ನಾರಾಯಣ ಇ–ಟೆಕ್ನೋ ಶಾಲೆಯ ಪ್ರಾಂಶುಪಾಲ ಸೇರಿ ಮೂವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಡಿ. 16ರಂದು ನಡೆದಿರುವ ಘಟನೆ ಸಂಬಂಧ ಮಕ್ಕಳ ತಾಯಿ ದೂರು ನೀಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ, ಬಾಲ ನ್ಯಾಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಕ್ಷಕರಾದ ಆಂಧ್ರಪ್ರದೇಶದ ರೇಷ್ಮಾ, ಕೇರಳದ ಮ್ಯಾಥ್ಯೂ ಹಾಗೂ ಪ್ರಾಂಶುಪಾಲ ಶಾಜಿ ಸೆಬಾಸ್ಟಿನ್ ಅವರನ್ನು ಬಂಧಿಸಲಾಗಿದೆ. ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಘಟನೆಯಲ್ಲಿ ವಿದ್ಯಾರ್ಥಿಯ ತಲೆಗೆ ಪೆಟ್ಟಾಗಿದ್ದು, ಪೋಷಕರೇ ಚಿಕಿತ್ಸೆ ಕೊಡಿಸಿದ್ದಾರೆ. ಬೆದರಿಕೆ ಹಾಕಿದ್ದರಿಂದ ಬಾಲಕಿ ಆತಂಕಗೊಂಡಿದ್ದಾಳೆ’ ಎಂದು ತಿಳಿಸಿದರು.

ADVERTISEMENT

ನೃತ್ಯ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ: ‘13 ವರ್ಷದ ಬಾಲಕ ಶಾಲಾ ವಾರ್ಷಿಕೋತ್ಸವದಲ್ಲಿ ನೃತ್ಯ ಪ್ರದರ್ಶಿಸಲು ತರಬೇತಿ ಪಡೆಯುತ್ತಿದ್ದ. ಡಿ. 16ರಂದು ಮಧ್ಯಾಹ್ನ ಸಹಪಾಠಿಯೊಬ್ಬ ಜೋರಾಗಿ ಸಂಗೀತ ಹಚ್ಚಿದ್ದ. ಆ ಬಗ್ಗೆ ಹೇಳಲೆಂದು ಬಾಲಕ, ಶಿಕ್ಷಕಿ ರೇಷ್ಮಾ ಬಳಿ ಹೋಗಿದ್ದ’ ಎಂದು ಪೊಲೀಸರು ಹೇಳಿದರು.

‘ದೂರು ಹೇಳುತ್ತಿದ್ದಂತೆ ಕೋಪಗೊಂಡಿದ್ದ ಶಿಕ್ಷಕಿ, ಕೋಲಿನಿಂದ ಹೊಡೆದಿದ್ದರು. ಅದರಿಂದ ಬಾಲಕ ತಪ್ಪಿಸಿಕೊಂಡಿದ್ದ. ಅವಾಗಲೇ ಡಸ್ಟರ್‌ನಿಂದ ತಲೆಗೆ ಹೊಡೆದಿದ್ದರು. ನಂತರ, ಥಳಿಸಿದ್ದರು. ಬಾಲಕನ ತಲೆಯಿಂದ ರಕ್ತ ಬರಲಾರಂಭಿಸಿತ್ತು.’

‘ತಾಯಿಗೆ ಕರೆ ಮಾಡಿದ್ದ ಶಿಕ್ಷಕರೊಬ್ಬರು, ‘ನಿಮ್ಮ ಮಗ ಆಟವಾಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದಾನೆ. ಪ್ರಾಂಶುಪಾಲರ ಕಚೇರಿಗೆ ಬನ್ನಿ’ ಎಂದಿದ್ದರು. ಶಾಲೆಗೆ ಹೋಗಿದ್ದ ತಾಯಿ, ಮಗನನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದರು. ರಾತ್ರಿಯೇ ಬಾಲಕ, ಶಿಕ್ಷಕಿಯ ಕೃತ್ಯದ ಬಗ್ಗೆ ತಾಯಿಗೆ ತಿಳಿಸಿದ್ದ’ ಎಂದು ಪೊಲೀಸರು ವಿವರಿಸಿದರು.

‘ನಾರಾಯಣ ಇ–ಟೆಕ್ನೋ ಶಾಲೆಯಲ್ಲೇ ಬಾಲಕನ ಅಕ್ಕ ಸಹ ಓದುತ್ತಿದ್ದಾಳೆ. ಘಟನೆ ನಡೆದ ಮರುದಿನ ಎಂದಿನಂತೆ ಆಕೆ ಶಾಲೆಗೆ ಹೋಗಿದ್ದಳು. ಆಕೆಯನ್ನು ಅಡ್ಡಗಟ್ಟಿದ್ದ ಶಿಕ್ಷಕಮ್ಯಾಥ್ಯೂ, ‘ನಿನ್ನ ತಮ್ಮನ ಮೇಲೆ ಹಲ್ಲೆ ನಡೆಸಿರುವ ವಿಚಾರವನ್ನು ಪೊಲೀಸರಿಗಾಗಲಿ ಹಾಗೂ ಮಕ್ಕಳ ಸಹಾಯವಾಣಿಗಾಗಲಿ ತಿಳಿಸಬಾರದು. ಆ ರೀತಿ ಮಾಡಿದರೆ, ನಿನ್ನನ್ನು ಪರೀಕ್ಷೆಯಲ್ಲಿ ಡಿಬಾರ್ ಮಾಡುತ್ತೇವೆ. ನಿನ್ನ ಹಾಗೂ ತಮ್ಮನ ಭವಿಷ್ಯವನ್ನೇ ಹಾಳು ಮಾಡುತ್ತೇವೆ’ ಎಂದು ಬೆದರಿಕೆಯೊಡ್ಡಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.