ADVERTISEMENT

ನಾರಾಯಣ ಗುರು- ಗಾಂಧಿ ಸಂವಾದದ ಶತಮಾನೋತ್ಸವ ಡಿ.3ಕ್ಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 13:57 IST
Last Updated 28 ನವೆಂಬರ್ 2025, 13:57 IST
ಬಿ.ಕೆ.ಹರಿಪ್ರಸಾದ್‌
ಬಿ.ಕೆ.ಹರಿಪ್ರಸಾದ್‌   

ಬೆಂಗಳೂರು: ಕೇರಳದ ವೈಕಂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಮಹಾತ್ಮ ಗಾಂಧೀಜಿ ಬಂದಿದ್ದಾಗ ಅವರು ಮತ್ತು ನಾರಾಯಣ ಗುರುಗಳ ನಡುವೆ ಐತಿಹಾಸಿಕ ಸಂವಾದ ನಡೆದಿತ್ತು. ಅದರ ಶತಮಾನೋತ್ಸವವನ್ನು ಡಿ.3ರಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಆಚರಿಸಲಾಗುವುದು ಎಂದು ಶತಮಾನೋತ್ಸವ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕೇರಳದ ವೈಕಂನಲ್ಲಿ ದೇವಾಲಯದ ಎದುರಿನ ರಸ್ತೆಯಲ್ಲಿ ಅಸ್ಪೃಶ್ಯರು ಮತ್ತು ಹಿಂದುಳಿದವರಿಗೆ ನಡೆದುಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಸತ್ಯಾಗ್ರಹ ನಡೆದಿತ್ತು. ಅದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಗಾಂಧೀಜಿ ಅವರು ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ನಾರಾಯಣ ಗುರುಗಳ ಪ್ರಭಾವದಿಂದಾಗಿ ಆನಂತರ ಗಾಂಧೀಜಿಯವರು ಅಸ್ಪ್ರಶ್ಯತೆ ನಿವಾರಣಾ ಆಂದೋಲನ ಆರಂಭಿಸಿದ್ದರು. ಅಲ್ಲಿವರೆಗೆ  ಯಂಗ್‌ ಇಂಡಿಯಾ ಪತ್ರಿಕೆ ನಡೆಸುತ್ತಿದ್ದ ಗಾಂಧೀಜಿ ಆನಂತರ ಹರಿಜನ ಪತ್ರಿಕೆ ಶುರು ಮಾಡಿದ್ದರು’ ಎಂದು ವಿವರಿಸಿದರು.

ಈ ನೆನಪಿನಲ್ಲಿ ವರ್ಕಲ ಶಿವಗಿರಿ ಮಠ, ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠವು ಹಮ್ಮಿಕೊಂಡಿರುವ ಶತಮಾನೋತ್ಸವವನ್ನು ಬೆಳಿಗ್ಗೆ 9.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಶಿವಗಿರಿ ಮಠದ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಅಧ್ಯಕ್ಷತೆ ವಹಿಸುವರು. ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ ಪ್ರಧಾನ ಸಂದೇಶ ನೀಡುವರು. ಶಿವಗಿರಿ ಮಠದ ಶುಭಾಂಗಾನಂದ ಸ್ವಾಮೀಜಿ ಪರಿನಿರ್ವಾಣ ಸಂದೇಶ ನೀಡುವರು ಎಂದು ಹೇಳಿದರು.

ADVERTISEMENT

ಗುರುಗಳ ಮಹಾಸಮಾಧಿ ಶತಾಬ್ದಿ ಕಾರ್ಯಕ್ರಮ, ಗುರುಗಳು ನಡೆಸಿದ ಸರ್ವಮತ ಸಮ್ಮೇಳನದ ಶತಮಾನೋತ್ಸವ ಅಂಗವಾಗಿ ಅಂದು ಮಧ್ಯಾಹ್ನ 2ರ ನಂತರ ಸರ್ವಮತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಶಿವಗಿರಿ ಮಠದ ಸ್ವಾಮಿ ರೀತಾಂಭರಾನಂದ ಸ್ವಾಮೀಜಿ ಸರ್ವ ಮತ ಸಂದೇಶ ನೀಡಲಿದ್ದಾರೆ. ವಿವಿಧ ಧರ್ಮ ತತ್ವಗಳ ಪರವಾಗಿ ಸೈಯದ್‌ ಪಾಣಕ್ಕಾಡ್‌ ಮುನವರ್‌ ಅಲಿ ಶಿಹಾಬ್‌ ತಂಙಳ್‌, ಬಿಷಪ್‌ ಮಾರ್‌ ಪೀಟರ್‌ ಪೌಲ್ ಸಲ್ದಾನ, ಸ್ವಾಮಿ ಜಿತಕಾಮಾನಂದಜಿ ಮಹಾರಾಜ, ಬಿಷಪ್‌ ಮಾರ್‌ ಜೇಮ್ಸ್‌ ಪಟ್ಟೆರಿಲ್‌, ಬ್ರಹ್ಮಕುಮಾರಿ ವೀಣಾ ಬೆಹನ್‌ಜಿ, ಭಿಕ್ಕು ಧಮ್ಮತಿಸ್ಸ ಅಶೋಕ ಆರಾಮ ಮಾತನಾಡಲಿದ್ದಾರೆ ಎಂದರು.

ಬೆಳಿಗ್ಗಿನಿಂದ ಸಂಜೆವರೆಗೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಸಚಿವರು, ಸಂಸದರು. ಶಾಸಕರು, ಸಮುದಾಯದ ನಾಯಕರು, ವಿವಿಧ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸಮಿತಿಯ ಸಂಚಾಲಕ ಪಿ.ವಿ. ಮೋಹನ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.