ADVERTISEMENT

‘ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ತಂತ್ರಜ್ಞಾನದ ನೆರವು’

ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 15:53 IST
Last Updated 15 ಡಿಸೆಂಬರ್ 2020, 15:53 IST
ನಾರಾಯಣ ಹೆಲ್ತ್‌ ಸಿಟಿಯಲ್ಲಿ ನಿರ್ಮಿಸಿರುವ ಆವಿಷ್ಕಾರ ಕೇಂದ್ರಕ್ಕೆ ಕಿರಣ್ ಮಜುಂದಾರ್ ಶಾ ಚಾಲನೆ ನೀಡಿದರು. ಡಾ.ದೇವಿಪ್ರಸಾದ್ ಶೆಟ್ಟಿ ಇದ್ದರು.
ನಾರಾಯಣ ಹೆಲ್ತ್‌ ಸಿಟಿಯಲ್ಲಿ ನಿರ್ಮಿಸಿರುವ ಆವಿಷ್ಕಾರ ಕೇಂದ್ರಕ್ಕೆ ಕಿರಣ್ ಮಜುಂದಾರ್ ಶಾ ಚಾಲನೆ ನೀಡಿದರು. ಡಾ.ದೇವಿಪ್ರಸಾದ್ ಶೆಟ್ಟಿ ಇದ್ದರು.   

ಬೆಂಗಳೂರು: ‘ವೈದ್ಯಕೀಯ ಕ್ಷೇತ್ರವನ್ನು ಕಾಡುತ್ತಿರುವ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಂತ್ರಜ್ಞಾನದ ನೆರವಿನಿಂದ ಆವಿಷ್ಕಾರ ನಡೆಸಲಾಗುವುದು’ ಎಂದು ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ತಿಳಿಸಿದರು.

ನಾರಾಯಣ ಹೆಲ್ತ್‌ ಸಿಟಿಯು ಮಜುಂದಾರ್ ಶಾ ವೈದ್ಯಕೀಯ ಪ್ರತಿಷ್ಠಾನದ ಸಹಯೋಗದಲ್ಲಿ ನಗರದಲ್ಲಿ ನಿರ್ಮಿಸಿರುವ ಆವಿಷ್ಕಾರ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ವೈದ್ಯರು, ವಿಜ್ಞಾನಿಗಳು ಹಾಗೂ ತಂತ್ರಜ್ಞಾನ ಪರಿಣಿತರನ್ನು ಒಂದೆಡೆ ಸೇರಿಸಿ, ವೈದ್ಯಕೀಯ ಕ್ಷೇತ್ರದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕೇಂದ್ರವು ಸಹಕಾರಿಯಾಗಲಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಕೂಡ ಆವಿಷ್ಕಾರ ನಡೆಸಬೇಕಿದೆ. ಆರೋಗ್ಯ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಅದೇ ರೀತಿ, ಈ ಕ್ಷೇತ್ರದಲ್ಲಿ ಪ್ರತಿನಿತ್ಯ ಹೊಸ ಹೊಸ ಆವಿಷ್ಕಾರಗಳು ಹಾಗೂ ಸಂಶೋಧನೆಗಳು ಆಗುತ್ತಿವೆ’ ಎಂದರು.

ನಾರಾಯಣ ಹೆಲ್ತ್‌ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ದೇವಿಪ‍್ರಸಾದ್ ಶೆಟ್ಟಿ, ‘ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತವಾಗಿದ್ದು, ವಿವಿಧ ಕ್ಷೇತ್ರದ ತಜ್ಞರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಈಗಾಗಲೇ 25ಕ್ಕೂ ಅಧಿಕ ನವೋದ್ಯಮಗಳಿಗೆ ನೆರವು ನೀಡಿದ್ದೇವೆ. 2021ರಲ್ಲಿ 10 ನವೋದ್ಯಮಗಳನ್ನು ಘೋಷಿಸಲಾಗುತ್ತದೆ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಗಬೇಕು. ಇದು ತಂತ್ರಜ್ಞಾನದ ನೆರವಿನಿಂದ ಮಾತ್ರ ಸಾಕಾರವಾಗಲಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.