ADVERTISEMENT

ಸಾಹಿತ್ಯ ಹಬ್ಬ | ದಲಿತ ಮಹಿಳೆ ಎಂಬ ವಿಶೇಷಣ ಬೇಕು: ಚರ್ಚೆ, ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 20:32 IST
Last Updated 9 ನವೆಂಬರ್ 2024, 20:32 IST
<div class="paragraphs"><p>ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬದಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿದರು - ಪ್ರಜಾವಾಣಿ ಚಿತ್ರ</p></div>

ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬದಲ್ಲಿ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿದರು - ಪ್ರಜಾವಾಣಿ ಚಿತ್ರ

   

ಬೆಂಗಳೂರು: ‘ಉನ್ನತ ವರ್ಗದ ಮಹಿಳೆಯರ ಮೇಲೆ ಅತ್ಯಾಚಾರವಾದರೆ ಈ ಸಮಾಜ ಅತ್ಯಂತ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಆದರೆ ದಲಿತ ಮಹಿಳೆ ಮೇಲೆ ಅತ್ಯಾಚಾರ ನಡೆದಾಗ ಅನುಕಂಪವೂ ಬರುವುದಿಲ್ಲ’ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ನ್ಯಾಷನಲ್‌ ಕಾಲೇಜು ಸಾಹಿತ್ಯ ಹಬ್ಬದಲ್ಲಿ ಅವರು ಶನಿವಾರ ಮಾತನಾಡಿದರು.

ADVERTISEMENT

‘ದಲಿತ ಬಂಡಾಯ ಸಾಹಿತ್ಯ ಅವಲೋಕನ’ ಕುರಿತು ವಿಚಾರ ಮಂಡಿಸುವಾಗ ಪ್ರಾಧ್ಯಾಪಕಿಯೊಬ್ಬರು, ‘ಮಹಿಳೆಯ ಮೇಲೆ ದೌರ್ಜನ್ಯ ನಡೆದರೆ ಅದನ್ನು ಮಹಿಳೆ ಮೇಲಿನ ದೌರ್ಜನ್ಯ ಎಂದೇ ಕರೆಯಲಾಗುತ್ತದೆ. ಆದರೆ ದಲಿತ ಮಹಿಳೆ ಮೇಲೆ ನಡೆದರೆ, ದಲಿತ ಮಹಿಳೆ ಮೇಲಿನ ದೌರ್ಜನ್ಯ ಎನ್ನಲಾಗುತ್ತದೆ. ಇಬ್ಬರೂ ಮಹಿಳೆಯರೇ ಅಲ್ಲವೇ. ದಲಿತ ಮಹಿಳೆ ಎಂಬ ವಿಶೇಷಣದ ಅಗತ್ಯವೇನಿದೆ’ ಎಂದು ಪ್ರಶ್ನಿಸಿದ್ದರು.

ಅದಕ್ಕೆ ಉತ್ತರಿಸಿದ ಜಯಪ್ರಕಾಶರು, ‘ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆದು ಆಕೆಯನ್ನು ಸುಟ್ಟುಹಾಕಿದ ಪ್ರಕರಣದಲ್ಲಿ ಇಡೀ ದೇಶವೇ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಒತ್ತಡದ ಕಾರಣದಿಂದ ಪೊಲೀಸರು ಯಾರನ್ನೋ ಎನ್‌ಕೌಂಟರ್‌ನಲ್ಲಿ ಕೊಂದು ಪ್ರಕರಣವನ್ನು ತಣ್ಣಗಾಗಿಸಿದರು. ಆದರೆ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆದು ಆಕೆಯನ್ನು ಸುಟ್ಟುಹಾಕಿದರೂ ಇಡೀ ದೇಶ ಅದಕ್ಕೆ ಎಲ್ಲಿ ಸ್ಪಂದಿಸಿತು’ ಎಂದು ಮರುಪ್ರಶ್ನಿಸಿದರು.

‘ಸಾಮಾಜಿಕ ಕಾರಣಕ್ಕೇ ದಲಿತ ಮಹಿಳೆ ಮೇಲೆ ದೌರ್ಜನ್ಯ ಹೆಚ್ಚು ನಡೆಯುತ್ತದೆ ಮತ್ತು ಆ ಬಗ್ಗೆ ಸಮಾಜದ ಎಲ್ಲ ವರ್ಗಗಳಿಂದ ಆಕ್ರೋಶ ವ್ಯಕ್ತವಾಗದು. ಹೀಗಾಗಿ, ‘ದಲಿತ ಮಹಿಳೆ ಮೇಲೆ ದೌರ್ಜನ್ಯ/ ಅತ್ಯಾಚಾರ’ ಎಂದು ವಿಶೇಷಣ ಸೇರಿಸಿಯೇ ಹೇಳಬೇಕಾಗುತ್ತದೆ’ ಎಂದರು. 

ಮತ್ತೊಬ್ಬ ಸಭಿಕರು, ‘ಸಾಹಿತ್ಯ ಘಟ್ಟಗಳನ್ನು ಬಂಡಾಯ ಮತ್ತು ದಲಿತ ಎಂದು ಗುರುತಿಸುವ ಅಗತ್ಯವೇನಿದೆ? ಬಂಡಾಯ ಎಂಬುದು ವ್ಯವಸ್ಥೆಯ ವಿರುದ್ಧದ ಹೋರಾಟ. ಸಾಹಿತ್ಯಕ್ಕೆ ಅದನ್ನು ಸೇರಿಸಿಬಿಟ್ಟರೆ ಅದರ ವ್ಯಾಪ್ತಿ ಸೀಮಿತವಾಗುವುದಿಲ್ಲವೇ? ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಉತ್ತಮ ಹೆಸರನ್ನು ಏಕೆ ಆಯ್ಕೆ ಮಾಡಬಾರದು’ ಎಂಬ ಪ್ರಶ್ನೆ ಮುಂದಿಟ್ಟರು.

‘ಕನ್ನಡದ ಬೇರೆಲ್ಲಾ ಸಾಹಿತ್ಯ ಘಟ್ಟಗಳನ್ನು ರೂಪಿಸಿದವರಲ್ಲಿ ಅವರ ಜಾತಿ ಮತ್ತು ಸಾಮಾಜಿಕ ಹಿನ್ನೆಲೆ ಮುಖ್ಯವಾಗಿರಲಿಲ್ಲ. ಆದರೆ ಬಂಡಾಯ ಮತ್ತು ದಲಿತ ಸಾಹಿತ್ಯವನ್ನು ರೂಪಿಸಿದವರ ಜಾತಿ ಮತ್ತು ಸಾಮಾಜಿಕ ಸ್ಥಿತಿ ಮುಖ್ಯವಾಗುತ್ತದೆ. ಈ ಕಾರಣದಿಂದ ಆ ಘಟ್ಟವನ್ನು ಆ ಹೆಸರಿನಿಂದಲೇ ಗುರುತಿಸಬೇಕು’ ಎಂದು ಜಯಪ್ರಕಾಶ್ ಪ್ರತಿಪಾದಿಸಿದರು. 

‘ಸಾಹಿತ್ಯ ಹಬ್ಬ’ದ ಎರಡನೇ ದಿನವಾದ ಪ್ರಾಧ್ಯಾಪಕಿ ಎನ್‌.ಆರ್‌.ಲಲಿತಾಂಬ ಅವರು, ‘ಜೈನ ಸಾಹಿತ್ಯ ಮತ್ತು ತತ್ವಗಳು’ ಕುರಿತು ವಿಷಯ ಮಂಡಿಸಿದರು. ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾದರು. ನಂತರದ ಅವಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ತಂಡವು ಜನಪದ ನೃತ್ಯಗಳನ್ನು ಪ್ರದರ್ಶಿಸಿತು. ಸುಧಾಕರ ಜೈನ್‌ ಮತ್ತು ತಂಡವು ತಾಳ ಮದ್ದಳೆ ಪ್ರಸ್ತುತಪಡಿಸಿತು.

ಸಾಹಿತ್ಯ ಹಬ್ಬದಲ್ಲಿ ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು - ಪ್ರಜಾವಾಣಿ ಚಿತ್ರ
‘ವೇದನೆ ನಿವೇದನೆ’
‘ಶತಮಾನಗಳಿಂದ ತಾವು ಅನುಭವಿಸಿದ್ದ ವೇದನೆಗಳನ್ನು ಜನರು ನಿವೇದಿಸಿಕೊಳ್ಳಲು ಆರಂಭಿಸುವ ಮೂಲಕ ದಲಿತ ಮತ್ತು ಬಂಡಾಯ ಸಾಹಿತ್ಯ ರೂಪುಗೊಂಡವು’ ಎಂದು ಬಂಜಗೆರೆ ಜಯ‍ಪ್ರಕಾಶ ಅವರು ಹೇಳಿದರು. ‘ಸ್ವಾತಂತ್ರ್ಯ ಮತ್ತು ಸಂವಿಧಾನದ ಮೂಲಕ ಶಿಕ್ಷಣ ಪಡೆದು ಒಂದೆರಡು ದಶಕಗಳ ನಂತರವೇ ದಲಿತರು ಮತ್ತು ಶೋಷಿತರು ತಮ್ಮ ತಮ್ಮ ಕತೆಗಳನ್ನು ಬರೆಯಲು ಆರಂಭಿಸಿದರು. ಗಟ್ಟಿಯಾದ ಸಾಹಿತ್ಯ ರೂಪುಗೊಳ್ಳಬೇಕಾದರೆ ಬರೆಯುವವನಲ್ಲಿ ಹೇಳಲು ಗಟ್ಟಿ ವಿಷಯ ಇರಬೇಕು. ಪರಿಣಾಮಕಾರಿಯಾಗಿ ಬರೆಯಲೂ ಬರಬೇಕು’ ಎಂದರು. ‘ಈ ಸಮುದಾಯಗಳ ಬರಹಗಾರರಲ್ಲಿ ಬರೆಯಲು ಸಾಕಷ್ಟು ವಿಷಯ ಇತ್ತು. ಆದರೆ ಅದು ಮೊದಲ ಬರಹವಾದ್ದರಿಂದ ಕೆಲವರು ಮೂದಲಿಸಿದ್ದೂ ಉಂಟು. ಆದರೆ ಒಟ್ಟಾರೆ ಕನ್ನಡ ಸಾಹಿತ್ಯ ವಲಯವು ದಲಿತ ಮತ್ತು ಬಂಡಾಯ ಸಾಹಿತ್ಯವನ್ನು ಸ್ವೀಕರಿಸಿ ಬೆಳೆಸಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.