ADVERTISEMENT

ರಾಷ್ಟ್ರೀಯ ಉದ್ಯೋಗ ನೀತಿ ಅಗತ್ಯ: ಬರಗೂರು

‘ಕಾಯಮೇತರ ಕೆಲಸಗಳು– ಉದ್ಯೋಗದ ಹಕ್ಕು’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 19:37 IST
Last Updated 24 ಅಕ್ಟೋಬರ್ 2018, 19:37 IST
ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ, ಪ್ರೊ. ಟಿ.ಆರ್‌.ಚಂದ್ರಶೇಖರ, ಡಾ. ಬರಗೂರು ರಾಮಚಂದ್ರಪ್ಪ, ಡಾ. ಶರತ್‌ ಬಾಬು‌, ಎಂ.ಎಸ್‌.ಮೀನಾಕ್ಷಿ ಸುಂದರಮ್‌ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ, ಪ್ರೊ. ಟಿ.ಆರ್‌.ಚಂದ್ರಶೇಖರ, ಡಾ. ಬರಗೂರು ರಾಮಚಂದ್ರಪ್ಪ, ಡಾ. ಶರತ್‌ ಬಾಬು‌, ಎಂ.ಎಸ್‌.ಮೀನಾಕ್ಷಿ ಸುಂದರಮ್‌ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಿರುದ್ಯೋಗ ಕಡಿಮೆ ಮಾಡುವ, ಕಾಯಂ ಉದ್ಯೋಗಿಗಳ ಪ್ರಮಾಣ ಹೆಚ್ಚಿಸುವ ಪರಿಕಲ್ಪನೆ ಒಳಗೊಂಡ ರಾಷ್ಟ್ರೀಯ ಉದ್ಯೋಗ ನೀತಿ ಬೇಕಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ ಆಶ್ರಯದಲ್ಲಿ ನಡೆದ ‘ಕಾಯಮೇತರ ಕೆಲಸಗಳು– ಉದ್ಯೋಗದ ಹಕ್ಕು’ ವಿಚಾರ ಸಂಕಿರಣದಲ್ಲಿ ಬುಧವಾರ ಅವರು ಮಾತನಾಡಿದರು.

‘ಎಲ್ಲಿಯವರೆಗೆ ಜ್ಞಾನಮುಖಿ ಶಿಕ್ಷಣ ಬೇಕು ಮತ್ತು ಎಲ್ಲಿಂದ ಉದ್ಯೋಗಮುಖಿ ಶಿಕ್ಷಣ ಕೊಡಬೇಕು ಎಂಬ ಬಗ್ಗೆ ಚಿಂತನೆ ಇರಬೇಕು. ಮುಕ್ತ ಮಾರುಕಟ್ಟೆಯ ಆರ್ಥಿಕ ನೀತಿಯ ಫಲವಾಗಿ ಇಂದು ಕಾಯಮೇತರ ಉದ್ಯೋಗಗಳು ಸೃಷ್ಟಿಯಾಗಿವೆ. ಹಾಗಿದ್ದರೆ ನಮ್ಮ ಶತ್ರುಗಳು ಎಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕು. ಹಣ ಮೂಲದ ಆರ್ಥಿಕ ನೀತಿ ಬದಲು ಅನ್ನಮೂಲದ ಆರ್ಥಿಕ ನೀತಿ ಬೇಕಾಗಿದೆ’ ಎಂದರು.

ADVERTISEMENT

‘ಹೊರಗುತ್ತಿಗೆ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಂಡು ಅಭದ್ರತೆಯಲ್ಲಿ ಸಿಲುಕಿಸಲಾಗುತ್ತದೆ. ಬದುಕಿನ ಭದ್ರತೆ ಸ್ವತಂತ್ರ ಭಾರತದ ಕನಸು. ಅದು ಇಲ್ಲವಾಗಿದೆ. ಒಂದು ರೀತಿ ಇಡೀ ದೇಶವೇ ನಾನಾ ರೂಪದಲ್ಲಿ ಗುತ್ತಿಗೆಗೆ ಒಳಗಾಗಿದೆ. ರಕ್ಷಣಾ ಇಲಾಖೆಯನ್ನೇ ಶೇ 100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಒಡ್ಡಿರುವ ನಾವು, ರಕ್ಷಣಾ ರಹಸ್ಯಗಳನ್ನು ಕಾಪಾಡುವ ಬಗ್ಗೆ ಮಾತಾಡುತ್ತಿದ್ದೇವೆ. ಇಂಥ ವೈರುಧ್ಯಗಳ ನಡುವೆ ನಾವಿದ್ದೇವೆ’ ಎಂದರು.

‘ಅಪನಗದೀಕರಣದ ಬಳಿಕ ದೇಶದಲ್ಲಿ 2.30 ಲಕ್ಷ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋದವು. 70 ಲಕ್ಷ ಉದ್ಯೋಗಗಳು ನಾಶವಾದವು. ಇದರಲ್ಲಿ ಬೃಹತ್‌ ಬಂಡವಾಳ ಹೂಡಿಕೆದಾರರನ್ನು ಬೆಳೆಸುವ, ಪೋಷಿಸುವ ಹುನ್ನಾರವಿದೆ. ಇದ್ಯಾವುದನ್ನೂ ಮಾಧ್ಯಮಗಳಲ್ಲಿ ಬೆಳಕಿಗೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಕಾಯಂ ಉದ್ಯೋಗಕ್ಕೆ ಸ್ಪಷ್ಟ ನೀತಿ ಇಲ್ಲವಾಗಿದೆ. ದೇಶದಲ್ಲಿ 10 ಲಕ್ಷ ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾಲಯಗಳು, ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿವೆ. ಲಖನೌದಲ್ಲಿ 368 ಜವಾನರ ಹುದ್ದೆಗೆ 23 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 2 ಲಕ್ಷ ಜನ ಪದವಿ, ಸ್ನಾತಕೋತ್ತರ ಪದವೀಧರರು ಇದ್ದರು. ಇದರಿಂದ ದೇಶದ ಉದ್ಯೋಗದ ಸ್ಥಿತಿಗತಿ ಅರ್ಥಮಾಡಿಕೊಳ್ಳಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.