ADVERTISEMENT

1.25 ಲಕ್ಷ ಮಂದಿಗೆ ಅಂಧತ್ವ: ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 16:58 IST
Last Updated 26 ಆಗಸ್ಟ್ 2021, 16:58 IST
ಅರುಂಧತಿ ಚಂದ್ರಶೇಖರ್
ಅರುಂಧತಿ ಚಂದ್ರಶೇಖರ್   

ಬೆಂಗಳೂರು: ‘ದೇಶದಲ್ಲಿ ಸದ್ಯ 1.25 ಲಕ್ಷ ಜನ ಅಂಧತ್ವ ಸಮಸ್ಯೆ ಎದುರಿಸುತ್ತಿದ್ದಾರೆ. ಅಂತಹವರಿಗೆ ದೃಷ್ಟಿ ಒದಗಿಸಲು ನೇತ್ರದಾನದ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಸೆ.8ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಹಮ್ಮಿಕೊಂಡಿದ್ದು, ನೇತ್ರದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

‘ಕಣ್ಣಿಗೆ ಗಾಯವಾಗುವಿಕೆ,ಅಪಘಾತ, ಜೀವಸತ್ವದ ಕೊರತೆ ಹಾಗೂ ಆನುವಂಶಿಕ ಸಮಸ್ಯೆಗಳಿಂದ ಕೆಲವರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ನೇತ್ರವನ್ನು ದಾನ ಮಾಡಿದಲ್ಲಿ ಸಾವಿನಲ್ಲಿಯೂ ಸಾರ್ಥಕತೆ ಕಾಣಲು ಸಾಧ್ಯ. ಹಾಗಾಗಿ, ಮರಣಾನಂತರ ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ದೇಶದಲ್ಲಿಪ್ರತಿವರ್ಷ 40 ಸಾವಿರದಿಂದ 50 ಸಾವಿರದಷ್ಟು ನೇತ್ರಗಳನ್ನು ಸಂಗ್ರಹಿಸಲಾಗುತ್ತಿದೆ. ದೇಶದಲ್ಲಿ 750 ನೇತ್ರ ಸಂಗ್ರಹಣಾ ಕೇಂದ್ರಗಳಿವೆ. ಕರ್ನಾಟಕದಲ್ಲಿ 32 ಕೇಂದ್ರಗಳಿವೆ. ವ್ಯಕ್ತಿ ಮರಣ ಹೊಂದಿದ 6 ಗಂಟೆಯೊಳಗೆ ನೇತ್ರವನ್ನು ದಾನವಾಗಿ ಪಡೆಯಲಾಗುತ್ತದೆ. ಈ ಪ್ರಕ್ರಿಯೆ ಗರಿಷ್ಠ ಅರ್ಧಗಂಟೆಯಲ್ಲಿ ನಡೆಯಲಿದೆ’ ಎಂದು ತಿಳಿಸಿದ್ದಾರೆ.

‘ನೇತ್ರದಾನ ಮಾಡಿದ ಬಳಿಕ ಮುಖ ವಿರೂಪಗೊಳ್ಳುವುದಿಲ್ಲ. ಆದ್ದರಿಂದ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಸಾವು ಸಂಭವಿಸಿದರೆ ನೇತ್ರದಾನದ ಬಗ್ಗೆ ಮಾಹಿತಿ ನೀಡಬೇಕು. ನಮ್ಮ ಸಿಬ್ಬಂದಿಯೇ ನೇತ್ರ ಸಂಗ್ರಹಿಸುತ್ತಾರೆ. ಒಂದು ವೇಳೆ ನೇತ್ರದಾನಕ್ಕೆ ಹೆಸರು ನೋಂದಾಯಿಸದಿದ್ದರೂ ಕುಟುಂಬದ ಸದಸ್ಯರು ಇಚ್ಛಿಸಿದಲ್ಲಿ ಕಣ್ಣುಗಳನ್ನು ದಾನವಾಗಿ ಪಡೆಯಬಹುದು. ಅವರು ಹತ್ತಿರದ ಆರೋಗ್ಯ ಕೇಂದ್ರ ಅಥವಾ 104 ಸಹಾಯವಾಣಿಗೆ ಕರೆ ಮಾಡಬೇಕು’ ಎಂದು ಹೇಳಿದ್ದಾರೆ.

‘ನೇತ್ರದಾನಕ್ಕೆ ವಯೋಮಿತಿಯ ನಿರ್ಬಂಧವಿಲ್ಲ. ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಇರುವವರು ಕೂಡ ನೇತ್ರದಾನಕ್ಕೆ ಅರ್ಹರು. ಒಂದು ಜೊತೆ ನೇತ್ರಗಳು ಇಬ್ಬರಿಗೆ ಸಹಕಾರಿಯಾಗಲಿದೆ. ಬದುಕಿದ್ದಾಗ ರಕ್ತದಾನ ಮಾಡಿ, ಮರಣಾನಂತರ ನೇತ್ರದಾನ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.