ಬೆಂಗಳೂರು: ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬೃಹತ್ ರಾಷ್ಟ್ರಧ್ವಜ ರೂಪಿಸಿ, ಕಾರ್ಗಿಲ್‌ನಲ್ಲಿ ಪ್ರದರ್ಶಿಸಲು ವಸ್ತ್ರಭಾರತ ಚಾರಿಟಬಲ್ ಟ್ರಸ್ಟ್ ಮುಂದಾಗಿದೆ. ಈ ಸದುದ್ದೇಶಕ್ಕೆಸಾರ್ವಜನಿಕರು ಕೈಜೋಡಿಸಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.
‘ದೇಶಕ್ಕೆ–ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬೃಹತ್ ಧ್ವಜ ಸಿದ್ಧ ಮಾಡಲು ಉದ್ದೇಶಿಸಿದ್ದೇವೆ. 60X90 ಅಡಿಯ (5,400 ಚದರ ಅಡಿ) ಧ್ವಜ ನಿರ್ಮಿಸಲಾಗುವುದು’ ಎಂದು ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಜೆ. ವಿನೋದ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾರ್ವಜನಿಕರ ಸಹಕಾರವಿಲ್ಲದೆ ಇಂತಹ ಬೃಹತ್ ಧ್ವಜ ಸಿದ್ಧಪಡಿಸುವುದು ಅಸಾಧ್ಯ. ಆದರೆ, ಕೊರೊನಾ ಪರಿಸ್ಥಿತಿ ಇರುವುದರಿಂದ ಹೆಚ್ಚು ಜನರನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ನಾವೇ ಒಂದೊಂದು ದಿನ ಒಂದೊಂದು ಊರಿಗೆ ಹೋಗಿ, ನಿರ್ದಿಷ್ಟ ಸ್ಥಳದಲ್ಲಿ ಉಳಿದುಕೊಂಡು, ಧ್ವಜ ಹೊಲಿಯುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಆಸಕ್ತರು ಬಂದು ಧ್ವಜ ಹೊಲಿಯಬಹುದು’ ಎಂದರು.
‘ಆ.14ರ ರಾತ್ರಿಯೊಳಗೆ ಧ್ವಜ ಸಿದ್ಧಪಡಿಸುವ ಗುರಿ ಇದೆ. ಮುಖ್ಯಮಂತ್ರಿಯವರಿಂದ ಅಂದು ಧ್ವಜಕ್ಕೆ ಪುಷ್ಪನಮನ ಸಲ್ಲಿಸಬೇಕು ಎಂದು ಕೋರಲಾಗುವುದು. ಅದಾದ ನಂತರ, ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಡಚಿದ ಧ್ವಜವನ್ನು ಪ್ರದರ್ಶಿಸಲಾಗುವುದು’ ಎಂದರು.
‘ರಾಜ್ಯದಲ್ಲಿ ಪ್ರದರ್ಶಿಸಿದ ನಂತರ, ಧ್ವಜವನ್ನು ಕಾರ್ಗಿಲ್‌ಗೆ ಒಯ್ಯಲಾಗುತ್ತದೆ. ಮುಂದಿನ ದೀಪಾವಳಿಯಂದು ಸುಮಾರು 600 ಯೋಧರು ಧ್ವಜವನ್ನು ಹಿಡಿದು ಪ್ರದರ್ಶಿಸಬೇಕು ಎಂದು ಕೋರಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು’ ಎಂದು ಅವರು ಹೇಳಿದರು.
‘ಧ್ವಜ ನಿರ್ಮಾಣಕ್ಕೆ ₹2 ಲಕ್ಷ ವೆಚ್ಚವಾಗುತ್ತದೆ. ಆದರೆ, ಅದನ್ನು ಕಾರ್ಗಿಲ್‌ವರೆಗೆ ತೆಗೆದುಕೊಂಡು ಹೋಗಲು ₹50 ಲಕ್ಷದವರೆಗೆ ಬೇಕಾಗುತ್ತದೆ. ಧ್ವಜ ಹೊಲಿಯಲು ಬರುವವರು ದೇಣಿಗೆ ನೀಡಬಹುದು. ಆದರೆ, ಇದು ಕಡ್ಡಾಯವಲ್ಲ. ಮಕ್ಕಳಲ್ಲಿ ರಾಷ್ಟ್ರೀಯತೆ ಮನೋಭಾವ ಬೆಳೆಸುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.
ಮಾಹಿತಿಗೆ: 98868-25741
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.