ಬೆಂಗಳೂರು: ತೋಟಗಾರಿಕೆ ಕ್ಷೇತ್ರದಲ್ಲಿನ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು, ತರಕಾರಿ ಹಾಗೂ ಹಣ್ಣಿನ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ರೈತರು, ಮೌಲ್ಯವರ್ಧಿತ ಉತ್ಪನ್ನಗಳು ವೀಕ್ಷಿಸಲು ಕುತೂಹಲದಿಂದ ಸಾಲುಗಟ್ಟಿ ನಿಂತ ಸಾರ್ವಜನಿಕರು...
ಇವು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆವರಣದಲ್ಲಿ ಗುರುವಾರದಿಂದ ಆರಂಭವಾದ ‘ರಾಷ್ಟ್ರೀಯ ತೋಟಗಾರಿಕೆ ಮೇಳ–2025’ರ ಮೊದಲ ದಿನ ಕಂಡು ಬಂದ ದೃಶ್ಯಗಳು.
ಕೊಬ್ಬರಿ ಪೇಸ್ಟ್, ಚಿಪ್ಸ್ ಸೇರಿದಂತೆ ತೆಂಗು ಮತ್ತು ಕೊಬ್ಬರಿಗೆ ಸಂಬಂಧಿಸಿದ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳು ಮೇಳದಲ್ಲಿ ರೈತರ ಗಮನ ಸೆಳೆದವು. ತಮಿಳುನಾಡಿನ ಕೃಷಿ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ಬಾಳೆ ಮತ್ತು ಸಪೋಟ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದರಲ್ಲಿ ಹೆಚ್ಚು ಇಳುವರಿ ನೀಡುವ ಸಪೋಟ ತಳಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ನೋಡಲು ಕ್ರಿಕೆಟ್ ಬಾಲ್‌ನಂತೆ ಭಾಸವಾಗುತ್ತದೆ ಈ ಸಪೋಟ ಹಣ್ಣು. ಇದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿದ್ದುದು ಕಂಡುಬಂತು.
ಮೊದಲ ದಿನ ರೈತರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಮೇಳದಲ್ಲಿ ಭಾಗವಹಿಸಿದ್ದರು. ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಛತ್ತೀಸಗಡ, ಗೋವಾ ಸೇರಿ ಹಲವಾರು ರಾಜ್ಯಗಳ ಕೃಷಿ ಮತ್ತು ತೋಟಗಾರಿಕಾ ಶಿಕ್ಷಣ ಸಂಸ್ಥೆಗಳು ಸಂಶೋಧಿಸಿರುವ ಹೊಸ ತಳಿ ಮತ್ತು ತಂತ್ರಜ್ಞಾನಗಳು ಗಮನ ಸೆಳೆದವು.
ಐಐಎಚ್‌ಆರ್ ಅಭಿವೃದ್ಧಿ ಪಡಿಸಿರುವ ಹಣ್ಣಿನ ಬೆಳೆಗಳು, ಔಷಧೀಯ ಮತ್ತು ಸಂಶೋಧನಾ ಬೆಳೆಗಳನ್ನು ತಾಕುಗಳಲ್ಲಿ ಸಮೃದ್ಧವಾಗಿ ಬೆಳೆಸಲಾಗಿದೆ. ವಿಷಯಾಧಾರಿತವಾಗಿ ವಿಂಗಡಿಸಿದ ತಾಕುಗಳು, ಪ್ರತಿ ತಾಕುಗಳಿಗೆ ಜೋಡಿಸಿದ್ದ ನಾಮಫಲಕಗಳು ರೈತರಿಗೆ ಯಾವುದೇ ಗೊಂದಲವಿಲ್ಲದಂತೆ ತಾಕಿನ ಬಳಿಗೆ ತೆರಳಲು ನೆರವಾಗುತ್ತಿದ್ದವು. ಪ್ರತಿ ತಾಕಿಗೂ ಒಬ್ಬೊಬ್ಬ ಉಸ್ತುವಾರಿಯನ್ನು ನೇಮಿಸಲಾಗಿದ್ದು, ರೈತರು ಅವರಿಂದ ಮಾಹಿತಿ ಪಡೆದರು.
ಐಐಎಚ್‌ಆರ್ ಆವರಣದಲ್ಲಿ ಬೆಳೆದಿರುವ ವಿವಿಧ ಬಗೆಯ ಹಣ್ಣು ಮತ್ತು ತರಕಾರಿ ಬೆಳೆಗಳ ಬಗ್ಗೆಯೂ ರೈತರು ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಐಐಎಚ್‌ಆರ್‌ನ ಮಳಿಗೆಗಳಲ್ಲೂ ಪ್ರದರ್ಶನ ಮತ್ತು ಮಾಹಿತಿಯ ವ್ಯವಸ್ಥೆ ಮಾಡಲಾಗಿದೆ.
ಕೃಷಿಯಲ್ಲಿ ಕಾರ್ಮಿಕರ ಕೊರತೆ ನೀಗಿಸುವಂತಹ ಯಂತ್ರೋಪಕರಣಗಳ ಬಗ್ಗೆ ರೈತರು ವಿಚಾರಿಸುತ್ತಿದ್ದರು. ರೈತರ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಲಾದ ಹತ್ತಾರು ಉಪಯುಕ್ತ ಯಂತ್ರೋಪಕರಣಗಳು ಮೇಳದ ಮತ್ತೊಂದು ಆಕರ್ಷಣೆ. ಒಟ್ಟು 250ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿವೆ. ಫುಡ್ ಕೋರ್ಟ್ ವ್ಯವಸ್ಥೆಯೂ ಇದೆ.
ವಿವಿಧ ಬಗೆಯ ಸಾವಯವ ಹಾಗೂ ಜೈವಿಕ ಗೊಬ್ಬರದ ಮಳಿಗೆಗಳ ಮುಂದೆ ರೈತರ ಗುಂಪು– ಗುಂಪಾಗಿ ಸೇರಿದ್ದರು. ಸೋಲಾರ್ ಆಧಾರಿತ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಹೇಗೆ? ಇದನ್ನು ಅಳವಡಿಸಿಕೊಂಡರೆ ರೈತರು ಯಾವ ರೀತಿಯ ಲಾಭಗಳಾಗುತ್ತವೆ ಎಂಬುದರ ಬಗ್ಗೆ ರೈತರು ಕಂಪನಿಯ ಪ್ರತಿನಿಧಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು.
ಮಹಿಳೆಯೊಬ್ಬರು ಅಣಬೆ ಮೌಲ್ಯವರ್ಧನೆ ಮೂಲಕ ಯಶಸ್ವಿ ಉದ್ಯಮಿಯಾಗಿದ್ದಾರೆ. ಕೇರಳದ ಕೊಲ್ಲಂ ಜಿಲ್ಲೆಯ ತಾಜುನ್ನೀಸ ಅವರು 12 ವರ್ಷಗಳ ಹಿಂದೆ ಅಣಬೆ ಕೃಷಿ ಪ್ರಾರಂಭಿಸಿದರು. ಆದಾಯವೂ ತಕ್ಕ ಮಟ್ಟಿಗೆ ಇತ್ತು. ಎರಡು ವರ್ಷಗಳಿಂದ ಅಣಬೆಯ ಮೌಲ್ಯವರ್ಧನೆಗೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ‘ನಾನು ಅಣಬೆ ಮಿಶ್ರಣ ಪುಡಿ ಪ್ರೊಟೀನ್ ಪುಡಿಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಇದಕ್ಕೆ ಕೇರಳ ಸರ್ಕಾರದ ‘ಆ್ಯಗ್ರೊ ಬ್ರ್ಯಾಂಡ್’ನಿಂದ ಅಂಗೀಕಾರವೂ ಸಿಕ್ಕಿದೆ. ನಮ್ಮ ಕಂಪನಿಯ ಮೂಲಕ ಅಣಬೆಗೆ ಸಂಬಂಧಿಸಿದ ಏಳು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ’ ಎಂದು ತಾಜುನ್ನೀಸ ವಿವರಿಸಿದರು. ‘ಒಣ ಅಣಬೆಗಳನ್ನು 20 ನಿಮಿಷ ಬಿಸಿ ನೀರಿನಲ್ಲಿ ಹಾಕಿದರೆ ತಾಜಾ ಅಣಬೆಯಾಗಿ ಮಾರ್ಪಡುತ್ತವೆ. ಇದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಹೆಲ್ತ್ ಮಿಕ್ಸ್ ಪುಡಿಯಲ್ಲಿ ಆಹಾರ ಧಾನ್ಯಗಳ ಪುಡಿ ಬಾಳೆಹಣ್ಣಿನ ಪುಡಿ ಸೇರಿಸಿ ವಿಟಮಿನ್ ಡಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದನ್ನು ಎಲ್ಲರೂ ಸೇವನೆ ಮಾಡಬಹುದು’ ಎಂದರು.
ಹೆಸರಘಟ್ಟ: ಇಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿರುವ ಮೂರು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಕೇಂದ್ರ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಗುರುವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ‘ರೈತರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. 2047ರೊಳಗೆ ಭಾರತ ವಿಶ್ವಕ್ಕೆ ಆಹಾರ ಪೂರೈಕೆ ಮಾಡುವ ದೊಡ್ಡ ರಾಷ್ಟ್ರವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಉತ್ಕೃಷ್ಟ ತಳಿಗಳು ನವೀನ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳು ಕೃಷಿ ಕ್ಷೇತ್ರವನ್ನು ಬಲಿಷ್ಠಗೊಳಿಸಬೇಕು’ ಎಂದು ಕರೆ ನೀಡಿದರು. ‘ಸುರಕ್ಷಿತ ಮತ್ತು ಗುಣಮಟ್ಟದ ಆಹಾರ ಉತ್ಪಾದನೆ ಹೆಚ್ಚು ಆದ್ಯತೆ ನೀಡಬೇಕಿದೆ. ರೆಡಿ ಟು ಈಟ್ ರೆಡಿ ಟು ಕುಕ್ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ನಮ್ಮ ರೈತರು ಇಂತಹ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಬೇಕು’ ಎಂದರು. ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಐಐಎಚ್‌ಆರ್ ನಿರ್ದೇಶಕ ತುಷಾರ್ ಕಾಂತಿ ಬೆಹರಾ ಶಾಸಕ ಸಿ.ಬಿ. ಸುರೇಶ್ ಬಾಬು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.