ADVERTISEMENT

ಕನ್ನಡಿಗ ಮೀಸಲಾತಿ ಯಥಾವತ್ತು ಜಾರಿಗೆ ಹಿಂದೇಟು: ದೂರು

ಉನ್ನತ ಶಿಕ್ಷಣ ಸಚಿವರಿಗೆ ರಾಷ್ಟ್ರೀಯ ಕಾನೂನು ಶಾಲೆ ಪತ್ರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 21:02 IST
Last Updated 5 ಮಾರ್ಚ್ 2023, 21:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆಯ (ನ್ಯಾಷನಲ್ ಲಾ ಸ್ಕೂಲ್ ಆಫ್‌ ಇಂಡಿಯಾ ಯುನಿವರ್ಸಿಟಿ) ಆಡಳಿತ ಮಂಡಳಿ ಕೋರ್ಸ್‌ಗಳ ಪ್ರವೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಮೀಸಲಾತಿ ನೀಡಬೇಕೆಂಬ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸಲು ಮತ್ತೆ ಹಿಂದೇಟು ಹಾಕುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ದೂರಿದ್ದಾರೆ.

ಕಾನೂನು ಶಾಲೆಯ ಕುಲಪತಿ ಪ್ರೊ. ಸುಧೀರ್‌ ಕೃಷ್ಣಸ್ವಾಮಿ ಅವರು ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವರಿಗೆ ಪತ್ರವೊಂದನ್ನು ಬರೆದಿದ್ದು, ಈ ಪತ್ರದಲ್ಲಿ ಮತ್ತೆ ತಮ್ಮ ಹಳೆಯ ವಾದವನ್ನೇ ಮುಂದಿಟ್ಟಿದ್ದಾರೆ. ಇದರಿಂದ ಕನ್ನಡಿಗ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದ್ದಾರೆ.

ಸಚಿವರಿಗೆ ಬರೆದಿರುವ ಪತ್ರದಲ್ಲಿ, ‘ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ನಿಮ್ಮ ಪತ್ರದ ಬಗ್ಗೆ ಚರ್ಚೆ ಮಾಡಿದ್ದು, ಮಂಡಳಿ ಸದಸ್ಯರು ವಿಶ್ವವಿದ್ಯಾಲಯದ ಕ್ರಮವನ್ನು ಪುಷ್ಟೀಕರಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣ ಬಾಕಿ ಇದ್ದು, ಸುಪ್ರೀಂಕೋರ್ಟ್‌ ನೀಡುವ ತೀರ್ಮಾನ ಪಾಲಿಸಲಾಗುವುದು’ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

‘ನೀವು (ಉನ್ನತ ಶಿಕ್ಷಣ ಸಚಿವರು) ಬರೆದ ಪತ್ರದ ಪ್ರತಿಗಳನ್ನು ಸಭೆಯಲ್ಲಿ ಮಂಡಳಿಯ ಎಲ್ಲ ಸದಸ್ಯರಿಗೂ ವಿತರಿಸಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ವಹಿಸಿದ್ದರು. ಶೇ 25 ರಷ್ಟು ಮೀಸಲಾತಿಯನ್ನು ವಿಭಾಗೀಕರಿಸಿ ಜಾರಿ ಮಾಡಿರುವ ವಿಷಯವನ್ನು ಅವರ ಗಮನಕ್ಕೆ ತರಲಾಯಿತು’ ಎಂದು ಹೇಳಿದ್ದಾರೆ.

ಈ ವಾದವನ್ನು ಒಪ್ಪದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾಲಯ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಏಕ ಮಾತ್ರ ಉದ್ದೇಶದಿಂದ ಕ‌ನ್ನಡಿಗ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಕನ್ನಡಿಗ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಮೀಸಲಾತಿ ನೀಡುವ ಬದಲು ಮೀಸಲಾತಿಯನ್ನೇ ವಿಭಾಗೀಕರಿಸಿದೆ (compartmentalize). ಅಖಿಲ ಭಾರತ ರ್‍ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನಗಳನ್ನು ಗಳಿಸಿರುವ ಕನ್ನಡಿಗ ವಿದ್ಯಾರ್ಥಿಗಳನ್ನು ಮೀಸಲಾತಿ ಅಡಿ ತಂದು ಸೇರಿಸಲಾಗುತ್ತಿದೆ. ಮೆರಿಟ್‌ ಆಧಾರದಲ್ಲಿ ಸೀಟು ಪಡೆಯುವ ಅರ್ಹತೆ ಇದ್ದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಸ್ಥಳೀಯ ಕೋಟಾಗೆ ಸೇರಿಸಿರುವುದು ಸರಿಯಲ್ಲ. ಇದು ಮೀಸಲಾತಿಯ ಆಶಯಕ್ಕೆ ವಿರುದ್ಧ ಎಂದು ಹೇಳಿದ್ದಾರೆ.

ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್‍ಯಾಂಕಿಂಗ್‌ ಪಡೆಯಲು ಸಾಧ್ಯವಾಗದ ಕನ್ನಡಿಗ ವಿದ್ಯಾರ್ಥಿ
ಗಳಿಗೆ ಪ್ರವೇಶದಲ್ಲಿ ಶೇ 25 ಮೀಸಲಾತಿ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್‍ಯಾಂಕಿಂಗ್‌ ಪಡೆದ ಕರ್ನಾಟಕದ ವಿದ್ಯಾರ್ಥಿಗಳನ್ನು ಇದರಲ್ಲಿ (ಶೇ 25 ಮೀಸಲಾತಿ) ಸೇರಿಸಬಾರದು. ಆಗ ಹೆಚ್ಚಿನ ಕನ್ನಡಿಗರಿಗೆ ಪ್ರವೇಶ ಸಿಗುತ್ತದೆ. ನ್ಯಾಷನಲ್‌ ಲಾ ಸ್ಕೂಲ್‌ ಸರ್ಕಾರದ ತೀರ್ಮಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಹೈಕೋರ್ಟ್‌ನಲ್ಲಿ ಅದಕ್ಕೆ ಜಯ ಸಿಕ್ಕಿತು. ಲಾ ಸ್ಕೂಲ್‌ಗೆ ರಾಜ್ಯ ಸರ್ಕಾರ ಭೂಮಿ, ನೀರು, ಪ್ರತಿ ವರ್ಷ ಅನುದಾನ ನೀಡುತ್ತಲೇ ಬಂದಿದೆ.ನಮ್ಮ ತೀರ್ಮಾನವನ್ನು ಯಥಾವತ್ತು ಜಾರಿ ಮಾಡಲು ವಿಶ್ವವಿದ್ಯಾಲಯ ತಯಾರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ವಿಧಾನಸಭೆಯ ಕಲಾಪದಲ್ಲಿ ಎಲ್ಲ ಪಕ್ಷಗಳ ಶಾಸಕರೂ ಲಾ ಸ್ಕೂಲ್‌ ಧೋರಣೆಯನ್ನು ಕಟುವಾಗಿ ಟೀಕಿಸಿದ್ದರು. ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್ ಮಾತನಾಡಿ, ‘ನಾವು ಜಾಗ ನೀಡಿ ಈ ಕಾಲೇಜು ಸ್ಥಾಪಿಸಿದ್ದೇವೆ. ರಾಜ್ಯದ ಈ ಸೌಜನ್ಯಕ್ಕೆ ಪ್ರತಿಯಾಗಿ ನಮ್ಮ ಮಕ್ಕಳಿಗೆ ಸ್ಥಾನ ನೀಡುವಿಕೆಯಲ್ಲಿ ನಿಗದಿತ ಮೀಸಲಾತಿ ಅನುಸರಿಸದೇ ಇದ್ದರೆ ಹೇಗೆ. ಬೇರೆ ರಾಜ್ಯಗಳಲ್ಲಿನ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಹೀಗೆಯೇ ನಡೆದುಕೊಳ್ಳುತ್ತವೆಯೇ. ಕರ್ನಾಟಕದಲ್ಲಿ ಮಾತ್ರ ಏಕೆ ಹೀಗೆ’ ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ‘ಈ ವಿಷಯ ಸೂಕ್ಷ್ಮವಾಗಿದೆ. ಶಾಲೆಯ ಆಡಳಿತ ಮಂಡಳಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೇ ಅಧ್ಯಕ್ಷರಾಗಿರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಕಾನೂನುಬದ್ಧವಾಗಿ ಸರ್ಕಾರ ಹೆಜ್ಜೆಯಿಟ್ಟು ಕನ್ನಡದ ಮಕ್ಕಳಿಗೆ ಸೀಟು ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.