
ಬೆಂಗಳೂರು: ಮಾಧ್ಯಮ ಮತ್ತು ರಾಜಕಾರಣ ಎಂಬ ಎರಡು ಕಣ್ಣುಗಳು ಸತ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾದರೆ ಸಮಾಜ ಕತ್ತಲೆಗೆ ಜಾರುತ್ತದೆ. ಇವುಗಳು ಜೊತೆಯಾಗಿ ಇದ್ದರೆ ಸಮಾಜದಲ್ಲಿ ಶಾಂತಿ ಇರುತ್ತದೆ. ಆಗ ಮಾತ್ರ ಶುದ್ಧ ಭಾರತ ನಿರ್ಮಾಣ ಮಾಡಬಹುದು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕಾರಣ ಮತ್ತು ಮಾಧ್ಯಮ ಸಮಾನವಾಗಿ, ಸಾಮರಸ್ಯದಿಂದ ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಒಂದು ಕಣ್ಣು ಸಮಾಜದ ಸಮಸ್ಯೆಗಳನ್ನು ತಿಳಿಸುತ್ತದೆ. ಆಗ ಇನ್ನೊಂದು ಕಣ್ಣು ಅದಕ್ಕೆ ಪರಿಹಾರ ಒದಗಿಸುತ್ತದೆ. ಸಮಾಜದಲ್ಲಿ ಏಕತೆ ಮತ್ತು ಸಾಮರಸ್ಯ ಕಾಪಾಡಲು ಹಿಂದೆಯೂ ಮಾಧ್ಯಮಗಳು ಕೊಡುಗೆ ನೀಡಿದ್ದವು. ಈಗಲೂ ಕೊಡುಗೆ ನೀಡುತ್ತಿವೆ ಎಂದರು.
ಜವಾಬ್ದಾರಿಯುತ ಆಡಳಿತವನ್ನು ಸರ್ಕಾರ ನೀಡಲು ಮಾಧ್ಯಮ ಬೇಕು. ಸಮಾಜಕ್ಕೆ ಕಂಟಕ ಎದುರಾದಾಗ ಮಾಧ್ಯಮಗಳು ನೆರವಿಗೆ ಬರಬೇಕು. ಜನರಿಗೆ ವಿಶ್ವಾಸ ಬರುವ ರೀತಿ ಮಾಧ್ಯಮಗಳು ಕೆಲಸ ಮಾಡಬೇಕು. ಸ್ವಸ್ಥ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸಂಸದೀಯ ವ್ಯವಸ್ಥೆಯ ಬಗ್ಗೆ ತಿಳಿಸುವ ಉದ್ದೇಶದಿಂದ ಒಂದು ವರ್ಷದ ಕೋರ್ಸ್ ಅನ್ನು ಪ್ರಾರಂಭಿಸುವ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಪತ್ರಕರ್ತ, ವೈದ್ಯ, ವಕೀಲ, ಎಂಜಿನಿಯರ್ ಹಾಗೂ ಇತರೆ ವೃತ್ತಿಗಳಿಗೆ ಕೋರ್ಸ್‌ಗಳಿವೆ. ಜನಪ್ರತಿನಿಧಿಯಾಗುವವರಿಗೆ ಯಾವುದೇ ಶಾಲೆ, ಕಾಲೇಜು ಇಲ್ಲ. ಹಾಗಾಗಿ ವರ್ಷದ ಕೋರ್ಸ್ ಪ್ರಾರಂಭಿಸುವ ಉದ್ದೇಶ ಇದೆ. ಅಲ್ಲದೇ ರಾಜ್ಯದ ಪತ್ರಿಕೋದ್ಯಮ ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಸದನಗಳ ಕಲಾಪಗಳನ್ನು ಆಲಿಸಲು ಅವಕಾಶ ನೀಡಲಾಗುವುದು ಎಂದರು.
ಎನ್‌ಡಿಟಿವಿ ನಿವೃತ್ತ ಸಂಪಾದಕಿ ನೂಪುರ್ ಬಸು ಮಾತನಾಡಿ, ‘ತಪ್ಪು ಮಾಹಿತಿಗಳು ಮಾಧ್ಯಮಗಳ ಹೆಸರನ್ನು ಕೆಡಿಸುತ್ತಿವೆ. ಧ್ವನಿ ಇಲ್ಲದವರಿಗೆ ಮಾಧ್ಯಮಗಳು ಧ್ವನಿಯಾಗಬೇಕು. ಮಾಧ್ಯಮಗಳಿಗೆ ಇಂದು ವಿಶ್ವಾಸಾರ್ಹತೆಯೇ ದೊಡ್ಡ ಸವಾಲಾಗಿದೆ. ಪತ್ರಕರ್ತರ ವಿರುದ್ಧ ಹಿಂಸಾಚಾರ, ದಾಳಿಗಳು, ದೂರುಗಳು, ಎಫ್‌ಐಆರ್ ಸಹ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ‘ಆರೋಗ್ಯವಂತ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಮಾಧ್ಯಮ ಬೇಕು. ಮಾಧ್ಯಮಗಳಿಗೆ ಸ್ವಾತಂತ್ರ್ಯ ಇಲ್ಲದಿದ್ದರೆ ಆರೋಗ್ಯವಾಗಿರುವುದಿಲ್ಲ. ಭಾರತೀಯ ಮಾಧ್ಯಮಗಳನ್ನು ಕಾರ್ಪೊರೇಟ್ ಜಗತ್ತು ಆಳುತ್ತಿದೆ. ಸರ್ಕಾರವನ್ನು ಪ್ರಶ್ನೆ ಮಾಡದಿದ್ದರೆ ಪ್ರಯೋಜನವಿಲ್ಲ. ಸಂಪಾದಕರು ಹಾಗೂ ಮಾಲೀಕರಿಗೆ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡಲಿ’ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ‘ಇಂದು ಸುದ್ದಿಗಳ ಪ್ರವಾಹವೇ ಇದೆ. ಈ ಪ್ರವಾಹದಲ್ಲಿ ವಿಶ್ವಾಸಾರ್ಹ ಸುದ್ದಿ ಯಾವುದು ಎಂಬುದೇ ಗೊಂದಲ. ಮಾಧ್ಯಮಗಳಿಗೆ ವಿಶ್ವಾಸಾರ್ಹತೆಯೇ ಮುಖ್ಯವಾಗಬೇಕು’ ಎಂದರು.
ಹಿರಿಯ ಪತ್ರಕರ್ತೆ ಆರ್ ಪೂರ್ಣಿಮಾ ಮಾತನಾಡಿ, ‘ಸುಳ್ಳು ಸುದ್ದಿಗೆ ಇಂದು ತಂತ್ರಜ್ಞಾನದ ಬೆಂಬಲ ಸಹ ಇದೆ. ಸತ್ಯ ಯಾವುದು ಎಂಬುದು ತಿಳಿಯಲಾಗದಷ್ಟು ಸುಳ್ಳು ವ್ಯಾಪಕವಾಗಿದೆ. ಕ್ಷಣಾರ್ಧದಲ್ಲಿ ಒಂದು ಸುದ್ದಿ ಇಡೀ ಜಗತ್ತು ಪ್ರಪಂಚ ಸುತ್ತಿ ಬರುತ್ತಿದೆ. ಯುವ ಪತ್ರಕರ್ತರು ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.