ADVERTISEMENT

ಬೆಂಗಳೂರು| ನೀರಿನ ಮರುಬಳಕೆ: ರಾಷ್ಟ್ರೀಯ ಕಾರ್ಯಾಗಾರ ನ.6ರಿಂದ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 19:22 IST
Last Updated 24 ಅಕ್ಟೋಬರ್ 2025, 19:22 IST
   

ಬೆಂಗಳೂರು: ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆಯನ್ನು ದೇಶದಾದ್ಯಂತ ಕಡ್ಡಾಯಗೊಳಿಸುವ ಸಮಗ್ರ ರಾಷ್ಟ್ರೀಯ ಯೋಜನೆ ರೂಪಿಸುವುದಕ್ಕಾಗಿ ಕೇಂದ್ರ ನೀತಿ ಆಯೋಗವು ಬೆಂಗಳೂರು ಜಲಮಂಡಳಿ ಸಹಯೋಗದಲ್ಲಿ ನವೆಂಬರ್ 6 ಮತ್ತು 7 ರಂದು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ. 

ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳ ಉನ್ನತ ಅಧಿಕಾರಿಗಳು, ಜಲ ತಜ್ಞರು ಮತ್ತು ಕೈಗಾರಿಕೆಗಳ ಮುಖ್ಯಸ್ಥರು ಭಾಗವಹಿಸಲಿದ್ದು, ನೀತಿ ನಿಯಮಗಳು, ಹಣಕಾಸು ಮಾದರಿಗಳು, ನೂತನ ತಂತ್ರಜ್ಞಾನದ ಅಳವಡಿಕೆ ಕುರಿತು ಚರ್ಚೆಯಾಗಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾರ್ಯಾಗಾರಕ್ಕೆ ಚಾಲನೆ ನೀಡುವರು.

‘ಬ್ರ್ಯಾಂಡ್‌ ಬೆಂಗಳೂರು ಅಭಿಯಾನದ ಅಡಿಯಲ್ಲಿ ತ್ಯಾಜ್ಯ ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡಲಾಗಿದೆ. ತ್ಯಾಜ್ಯ ನೀರಿನ ಬಳಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಜಲಮಂಡಳಿ ಮಾದರಿಯಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ADVERTISEMENT

ಬೆಂಗಳೂರು ನಗರದಲ್ಲಿ ಶೇ 90ರಷ್ಟು ಒಳಚರಂಡಿ ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿದ್ದು, 1,348 ಎಂ.ಎಲ್‌.ಡಿ ಯಷ್ಟು ನೀರನ್ನು ಶುದ್ಧೀಕರಿಸಲಾಗುತ್ತಿದೆ. ಈ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಕೆರೆ ತುಂಬಿಸಲಾಗುತ್ತಿದೆ. ಪಾರ್ಕ್‌ ಮತ್ತು ಉದ್ಯಾನಗಳ ನಿರ್ವಹಣೆ ಜತೆಯಲ್ಲಿಯೇ ಕೈಗಾರಿಕೆಗಳಿಗೂ ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.