ಬೆಂಗಳೂರು: ಸಿ.ವಿ.ರಾಮನ್ ನಗರದಲ್ಲಿರುವ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದಲ್ಲಿ 17 ವರ್ಷದೊಳಗಿನ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲಾಗಿದೆ.
ಕ್ರೀಡಾಕೂಟದಲ್ಲಿ ದೇಶದ ವಿವಿಧ ಭಾಗಗಳಿಂದ 24 ತಂಡಗಳ 288 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಅಸಾಧಾರಣ ಕೌಶಲ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು.
ಕೇಂದ್ರೀಯ ವಿದ್ಯಾಲಯ ಸಂಘಟನೆಯ (ಕೆವಿಎಸ್) ಪ್ರಾದೇಶಿಕ ಕಚೇರಿಯ ಉಪ ಆಯುಕ್ತ ಶೇಖ್ ತಾಜುದ್ದೀನ್ ಅವರು ಕೆವಿಎಸ್ ಧ್ವಜಾರೋಹಣ ನೆರವೇರಿಸಿದರು.
ಎಡಿಇ ವಿಜ್ಞಾನಿ ವರ್ಷಾ ಅಗರ್ವಾಲ್ ದೀಪ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ‘ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಮತ್ತು ತಂಡವಾಗಿ ಕೆಲಸ ಮಾಡುವಂತಹ ಕೌಶಲಗಳನ್ನು ಬೆಳೆಸುತ್ತದೆ’ ಎಂದು ಹೇಳಿದರು. ಹೆಚ್ಚು ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದರು.
ಕ್ರೀಡಾಕೂಟದ ಭಾಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಗುಂಪು ನೃತ್ಯ ಮತ್ತು ಯೋಗ ಪ್ರದರ್ಶಿಸಿದರು.
ನಂತರ ವರ್ಷಾ ಅಗರ್ವಾಲ್ ಅವರು, ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಚಂಡೀಗಢ ಮತ್ತು ಬೆಂಗಳೂರು, ಚೆನ್ನೈ ಮತ್ತು ಆಗ್ರಾ ತಂಡಗಳ ನಡುವೆ ಕಬಡ್ಡಿ ಪಂದ್ಯಗಳು ನಡೆದವು.
ಕಾರ್ಯಕ್ರಮದಲ್ಲಿ ವಿಜ್ಞಾನಿ ವಿನೋದ್ ವಿಶ್ವಕರ್ಮ, ಪ್ರಾಚಾರ್ಯೆ ಗ್ಲೋರಿ ಜ್ಞಾನಸೆಲ್ವಿ , ಕೇಂದ್ರೀಯ ವಿದ್ಯಾಲಯ ಎಂ.ಜಿ ರೈಲ್ವೆಯ ಪ್ರಾಚಾರ್ಯ ರುಡಾಲ್ ದುಬೆ, ಕೆವಿ ಡಿಆರ್‌ಡಿಒ ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ರಾಜಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.