ADVERTISEMENT

ಮನೆಯಲ್ಲೇ ಕುಳಿತು ಕಿವಿ ಪರೀಕ್ಷೆ ಮಾಡಿಕೊಳ್ಳಿ

ನಾಯಕ್ ವಾಕ್ ಶ್ರವಣ ಸಂಸ್ಥೆಯಿಂದ ‘ವಾಕ್ ನಾದ’ ಶ್ರವಣ ಪರೀಕ್ಷೆ ವಿಧಾನ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:39 IST
Last Updated 2 ಮಾರ್ಚ್ 2020, 19:39 IST

ಬೆಂಗಳೂರು: ಶ್ರವಣ ದೋಷ ಸಮಸ್ಯೆ ಇದೆ ಎಂಬ ಅನುಮಾನ ಇದ್ದರೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಬೇಕಿಲ್ಲ. ಮನೆಯಲ್ಲೇ ಕುಳಿತು ಉಚಿತವಾಗಿ ಕಿವಿ ಪರೀಕ್ಷೆ ಮಾಡಿಕೊಳ್ಳಬಹುದಾದ ‘ವಾಕ್ ನಾದ’ ಶ್ರವಣ ಪರೀಕ್ಷೆ ವಿಧಾನವನ್ನು ನಾಯಕ್ ವಾಕ್ ಶ್ರವಣ ಸಂಸ್ಥೆ ಅಭಿವೃದ್ಧಿಪಡಿಸಿದೆ.

20 ಶುದ್ಧ ತರಂಗ ಶಬ್ದ ಮತ್ತು 20 ಜೋಡಿ ಪದಗಳ ಪಟ್ಟಿಯ ಆಡಿಯೊ ಸಂಸ್ಥೆಯ ವೆಬ್‌ಸೈಟ್‌ನಲ್ಲಿ (www.nayakshearingcareclinic.com) ಅಪ್‌ಲೋಡ್ ಮಾಡಲಾಗಿದ್ದು, ವಿಶ್ವ ಶ್ರವಣ ದಿನಾಚರಣೆ ದಿನವಾದ ಮಂಗಳವಾರ ಈ ಪರೀಕ್ಷಾ ವಿಧಾನ ಬಿಡುಗಡೆಯಾಗಲಿದೆ.

‘ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಈ ವಿಧಾನ ಅಭಿವೃದ್ಧಿಪಡಿಸಲಾಗಿದೆ. ಫೋನ್ ಅಥವಾ ಇ–ಮೇಲ್ ಮೂಲಕ ಸಂಪರ್ಕಿಸಿದವರಿಗೂ ಲಿಂಕ್ ಕಳುಹಿಸಲಾಗುವುದು. ಈ ರೀತಿಯ ಆನ್‌ಲೈನ್ ಪರೀಕ್ಷಾ ವಿಧಾನ ಅಭಿವೃದ್ಧಿಪಡಿಸಿರುವುದು ಭಾರತದಲ್ಲೇ ಮೊದಲು’ ಎಂದು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಎಂ.ಎಸ್‌.ಜಿ. ನಾಯಕ್ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಈ ಪರೀಕ್ಷೆ ಮಾಡುವಾಗ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ ಅನ್ನು ಆರು ಅಡಿ ದೂರದಲ್ಲಿ ಇಟ್ಟು ಕುಳಿತುಕೊಳ್ಳಬೇಕು. ನಿಶ್ಯಬ್ದ ಸ್ಥಳವೇ ಬೇಕು ಎಂದೇನೂ ಇಲ್ಲ. ಆದರೆ, ಇಬ್ಬರು ಕುಳಿತುಕೊಳ್ಳಬೇಕು. 20 ರೀತಿಯ ತರಂಗ ಶಬ್ದಗಳಲ್ಲಿ 16ರಿಂದ 17 ಶಬ್ದಗಳು ಕೇಳಿಸಿದರೆ ತೊಂದರೆ ಇಲ್ಲ. ಆದರೆ, 10ಕ್ಕೂ ಕಡಿಮೆ ಶಬ್ದಗಳು ಕೇಳಿಸಿದರೆ ಶ್ರವಣದೋಷ ಇದೆ ಎಂದೇ ಅರ್ಥ. ಅದೇ ರೀತಿ 40 ಜೋಡಿ ಪದಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಅವುಗಳಲ್ಲಿ ಕನಿಷ್ಠ 20 ಪದಗಳು ಸ್ಪಷ್ಟವಾಗಿ ಕೇಳಬೇಕು. ಇಬ್ಬರಲ್ಲಿ ಒಬ್ಬರಿಗೆ ಕೇಳಿಸಿ, ಇನ್ನೊಬ್ಬರಿಗೆ ಕೇಳಿಸದೇ ಇದ್ದರೆ ದೋಷ ಇದೆ ಎಂದು ಅರ್ಥ’ ಎಂದು ಹೇಳಿದರು.

‘ಶ್ರವಣ ದೋಷ ಸಮಸ್ಯೆ ಕಡಿಮೆ ಪ್ರಮಾಣದಲ್ಲಿ ಇದ್ದಾಗಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಸಾಕಷ್ಟು ಮಂದಿ ನಿರ್ಲಕ್ಷ್ಯ ವಹಿಸಿ ಸಂಪೂರ್ಣವಾಗಿ ಕಿವಿ ಕೇಳಿಸದೇ ಇದ್ದಾಗ ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ, ಮನೆಯಲ್ಲೇ ಕುಳಿತು 2ರಿಂದ 4 ನಿಮಿಷದಲ್ಲಿ ತಾವೇ ಪರೀಕ್ಷೆ ಮಾಡಿಕೊಳ್ಳುವ ಅನುಕೂಲವನ್ನು ಸಂಸ್ಥೆ ಮಾಡಿಕೊಟ್ಟಿದೆ. ಇದರಿಂದ ಸಂಸ್ಥೆಗೆ ಯಾವುದೇ ಲಾಭ ಇಲ್ಲ. ಸಾಮಾಜಿಕ ಕಳಕಳಿಯಿಂದಷ್ಟೇ ಈ ಕಾರ್ಯ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.