ADVERTISEMENT

ನಿಗದಿಯಂತೆ ಶಾಲೆ ಆರಂಭಕ್ಕೆ ಎನ್‌ಸಿಇಇ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 19:50 IST
Last Updated 15 ಅಕ್ಟೋಬರ್ 2021, 19:50 IST

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಈ ಹಿಂದೆ ಘೋಷಿಸಿರುವಂತೆ ಅಕ್ಟೋಬರ್‌ 21ರಿಂದ ಕಿರಿಯ ಪ್ರಾಥಮಿಕ ಶಾಲೆಗಳ ತರಗತಿ ಆರಂಭಿಸಬೇಕು ಎಂದು ಶಿಕ್ಷಣ ತುರ್ತು ಪರಿಸ್ಥಿತಿಗಾಗಿ ರಾಷ್ಟ್ರೀಯ ಒಕ್ಕೂಟ (ಎನ್‌ಸಿಇಇ) ಆಗ್ರಹಿಸಿದೆ.

‘ಅ.21ರಿಂದ ಕಿರಿಯ ಪ್ರಾಥಮಿಕ ಶಾಲೆಗಳ ತರಗತಿ ಆರಂಭಿಸುವುದಾಗಿ ಸಚಿವರು ಘೋಷಿಸಿದ್ದರು. ಈಗ, ಪುನಃ ತರಗತಿ ಆರಂಭದ ಕುರಿತು ಪೋಷಕರ ಜತೆ ಚರ್ಚಿಸುವುದಾಗಿ ಹೇಳಿರುವುದು ನಿರಾಶಾದಾಯಕ ಬೆಳವಣಿಗೆ. ಸರ್ಕಾರ ಇನ್ನು ವಿಳಂಬ ಮಾಡಬಾರದು. ನಿಗದಿಯಂತೆಯೇ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೂ ತರಗತಿ ಆರಂಭಿಸಬೇಕು’ ಎಂದು ಒಕ್ಕೂಟದ ಸದಸ್ಯರಾದ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಮತ್ತು ಗುರುಮೂರ್ತಿ ಕಾಶಿನಾಥನ್‌ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಶಾಲೆಗಳ ಆರಂಭ ವಿಳಂಬದಿಂದ ಮಕ್ಕಳಲ್ಲಿ ಅಪೌಷ್ಟಿಕತೆ, ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿದೆ. ಕೋವಿಡ್‌ನಿಂದ ಮಕ್ಕಳಿಗೆ ತೊಂದರೆಯಾಗದು ಎಂಬ ಪುರಾವೆಗಳು ಇವೆ. ತಕ್ಷಣ ಮಧ್ಯಾಹ್ನದ ಬಿಸಿಯೂಟದೊಂದಿಗೆ ತರಗತಿಗಳನ್ನು ಆರಂಭಿಸಬೇಕು. ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಬಯಸುವ ಪೋಷಕರಿಗೆ ಪ್ರೋತ್ಸಾಹ ನೀಡಬೇಕು. ಕಳುಹಿಸಲು ಇಚ್ಛಿಸದವರಿಗೆ ಬಲವಂತ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ADVERTISEMENT

ಶಾಲೆಗಳ ಪುನರಾರಂಭ ಪ್ರಕ್ರಿಯೆಯಲ್ಲಿ ಪೋಷಕರನ್ನೂ ತೊಡಗಿಸಿಕೊಳ್ಳಬೇಕು. ಮಕ್ಕಳಿಗೆ ಹೆಚ್ಚು ಪೋಷಕಾಂಶಗಳಿರುವ ಆಹಾರ ನೀಡಬೇಕು. ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಶಾಲೆಯನ್ನು ತೆರೆಯುವ ವಿಚಾರದಲ್ಲಿ ವಿಳಂಬಕ್ಕೆ ಸಕಾರಣಗಳಿಲ್ಲ. ವಿಳಂಬದಿಂದ ಮಕ್ಕಳ ಬದುಕಿಗೆ ಹಾನಿಯಾಗುತ್ತದೆ. ಈ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.