ಬೆಂಗಳೂರು: ಅಕ್ರಮಗಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಸೋಮವಾರ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಯೋಗದ ಅಧ್ಯಕ್ಷೆ ವಿಜಯ ರಹತ್‌ಕರ್ ಮತ್ತು ಸದಸ್ಯ ಕಾರ್ಯದರ್ಶಿ ಸುದೀಪ್ ಜೈನ್, ಸದಸ್ಯರಾದ ಡೆಲಿನಾ ಖೋಂಗ್ಡಪ್, ಮಮತಾ ಕುಮಾರ, ಡಾ ಅರ್ಚನಾ ಮಜುಂದಾರ್ ಮತ್ತು ಇತರೆ ಅಧಿಕಾರಿಗಳು ಬೆಳಿಗ್ಗೆ 8 ಗಂಟೆಗೆ ಜೈಲಿಗೆ ಭೇಟಿ ನೀಡಿ, ಹಾಜರಾತಿ ಪುಸ್ತಕ ಹಾಗೂ ಕೆಲವೊಂದು ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ನಂತರ ಮಹಿಳಾ ಬ್ಯಾರಕ್‌ಗಳಿಗೆ ತೆರಳಿ ಸಜಾ ಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳ ಜತೆ ಸುಮಾರು ಎರಡು ತಾಸು ಚರ್ಚಿಸಿದರು. ಈ ವೇಳೆ ಕೆಲ ಮಹಿಳಾ ಕೈದಿಗಳು, ಜೈಲಿನಲ್ಲಿರುವ ಕೆಲವೊಂದು ಅವ್ಯವಸ್ಥೆ ಬಗ್ಗೆ ದೂರು ನೀಡಿದರು ಎಂದು ಹೇಳಲಾಗಿದೆ. ಈ ವೇಳೆ ಆಯೋಗದಿಂದಾಗುವ ಉಪಯೋಗಗಳ ಬಗ್ಗೆ ಕೈದಿಗಳಿಗೆ ವಿವರಿಸಲಾಯಿತು.
ಆ ಬಳಿಕ ಜೈಲಿನ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ವಿಜಯ ರಹತ್‌ಕರ್ ಮತ್ತು ತಂಡ, ಮಹಿಳಾ ಕೈದಿಗಳಿಗೆ ಜೈಲಿನಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಆಯೋಗದ ಮುಖ್ಯಸ್ಥರು, ಮಹಿಳಾ ಕೈದಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು, ಕೈದಿಗಳ ಮೇಲೆ ದೌರ್ಜನ್ಯ ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಬಳಿಕ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು. ಈ ವೇಳೆ ಪೊಲೀಸ್ ಇಲಾಖೆಯಿಂದ ಆಯೋಜಿಸಿರುವ ಒನ್ ಸ್ಟಾಪ್ ಒನ್ ಸಖಿ, ಸೇಫ್ಟಿ ಐ ಲ್ಯಾಂಡ್, ಕಮಾಂಡ್ ಸೆಂಟರ್, ಮನೆ ಮನೆಗೆ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಳ ಬಗ್ಗೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಹಿಳಾ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿತ್ತು.
ಇದೇ ವೇಳೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೂರುಗಳನ್ನು ತ್ವರಿತವಾಗಿ ಪರಿಶೀಲಿಸಿ, ಸಂವೇದನಾ ಶೀಲ ರೀತಿಯಲ್ಲಿ ಪರಿಹಾರ ಒದಗಿಸುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರು ಸಲಹೆ ನೀಡಿದರು.
ಸಭೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ, ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಡಿಸಿಪಿ ಅನಿತಾ ಹದ್ದಣ್ಣನವರ್, ಎಚ್. ಶೇಖರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಇದ್ದರು.
‘ಮಹಿಳೆಯರ ಸುರಕ್ಷತೆಯೇ ನಮ್ಮ ಆದ್ಯತೆ’
ಬೆಂಗಳೂರು: ‘ಮಹಿಳೆಯರ ಗೌರವ, ಸಬಲೀಕರಣ ಮತ್ತು ಭದ್ರತೆ ನಮ್ಮ ಆದ್ಯತೆ ಆಗಿದೆ’ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ ಮಹಿಳಾ ಆಯೋಗ ಅಪ್ ಕೇ ದ್ವಾರ್– ಮಹಿಳಾ ಜನ್ ಸುನ್ವಾಹಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ನೀಡಲು ಈ ಕಾರ್ಯಕ್ರಮವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಈಗ ಆಯೋಗವೇ ಮಹಿಳೆಯರ ಬಳಿ ಬರುತ್ತಿದೆ. ಸೋಮವಾರ ಮತ್ತು ಮಂಗಳವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಮಹಿಳೆಯರ ಅಹವಾಲುಗಳನ್ನು ಪರಿಶೀಲಿಸಿ, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
‘ಆಯೋಗವು ಮಹಿಳೆಯರ ಅಹವಾಲುಗಳ ಜೊತೆಗೆ ಸಮಾಜದಲ್ಲಿ ನಡೆಯುವ ಅಸಮಾನತೆ, ಅನ್ಯಾಯಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಹೊಸ ಕಾನೂನುಗಳು, ನೀತಿಗಳನ್ನು ರೂಪಿಸುವಲ್ಲಿ ಆಯೋಗವು ಮಹತ್ವದ ಪಾತ್ರ ವಹಿಸುತ್ತದೆ’ ಎಂದರು.
ರಾಷ್ಟ್ರಿಯ ಮಹಿಳಾ ಆಯೋಗದ ಸದಸ್ಯರಾದ ಡೆಲಿನಾ ಕಾಂಡು, ಮಮತಾ ಕುಮಾರಿ, ಅರ್ಚನಾ ಮುಜೆಂಡಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೀಮಾಂತ್ ಕುಮಾರ್ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.