ADVERTISEMENT

ಕಲುಷಿತ ವಾತಾವರಣ: ಜೈನ ತತ್ವದಿಂದ ಪರಿಹಾರ: ಪದ್ಮರಾಜ ದೇಸಾಯಿ

ಹೈಕೋರ್ಟ್ ನ್ಯಾಯಮೂರ್ತಿ ಪದ್ಮರಾಜ ದೇಸಾಯಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 21:00 IST
Last Updated 23 ಅಕ್ಟೋಬರ್ 2022, 21:00 IST
ಅನಿತಾ ಸುರೇಂದ್ರ ಕುಮಾರ್ ಅವರಿಗೆ ಸಾಹಿತಿ ಕಮಲಾ ಹಂಪನಾ ಅವರು ‘ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ’ ಪ್ರದಾನ ಮಾಡಿದರು. ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್, ಹಂ.ಪ. ನಾಗರಾಜಯ್ಯ, ನ್ಯಾ. ಪದ್ಮರಾಜ ದೇಸಾಯಿ ಹಾಗೂ ಟ್ರಸ್ಟ್‌ನ ಧರ್ಮದರ್ಶಿ ಪಿ.ವೈ. ರಾಜೇಂದ್ರ ಕುಮಾರ್ ಇದ್ದಾರೆ.
ಅನಿತಾ ಸುರೇಂದ್ರ ಕುಮಾರ್ ಅವರಿಗೆ ಸಾಹಿತಿ ಕಮಲಾ ಹಂಪನಾ ಅವರು ‘ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ’ ಪ್ರದಾನ ಮಾಡಿದರು. ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್, ಹಂ.ಪ. ನಾಗರಾಜಯ್ಯ, ನ್ಯಾ. ಪದ್ಮರಾಜ ದೇಸಾಯಿ ಹಾಗೂ ಟ್ರಸ್ಟ್‌ನ ಧರ್ಮದರ್ಶಿ ಪಿ.ವೈ. ರಾಜೇಂದ್ರ ಕುಮಾರ್ ಇದ್ದಾರೆ.   

ಬೆಂಗಳೂರು: ‘ಕಲುಷಿತ ವಾತಾವರಣದಲ್ಲಿ ಸಮಾಜವಿದೆ. ಈ ವೇಳೆ ಜೈನ ತತ್ವಗಳ ಪ್ರಸಾರ ಅಗತ್ಯ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪದ್ಮರಾಜ ದೇಸಾಯಿ ತಿಳಿಸಿದರು.

ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿತಾ ಸುರೇಂದ್ರ ಕುಮಾರ್ ಅವರಿಗೆ ‘ಆದರ್ಶ ಜೈನ ಮಹಿಳಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ. ‘ಬದಲಾದ ಸಮಾಜದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರ ಗಳಲ್ಲಿಯೂ ಮುನ್ನೆಲೆಗೆ ಬರುತ್ತಿದ್ದಾರೆ. ನ್ಯಾಯಾಲಯ ಸೇರಿ ವಿವಿಧೆಡೆ ಮಹಿಳಾ ಪ್ರಾತಿನಿಧ್ಯ ಹೆಚ್ಚುತ್ತಿದೆ. ಇದು ಉತ್ತಮ ಬೆಳವಣಿಗೆ. ಈ ಸಮಾಜದಲ್ಲಿ ಜೈನರಾಗಿ ಹುಟ್ಟುವುದು ಮಹಾಪುಣ್ಯ. ಅದರಲ್ಲೂ ಆದರ್ಶರಾಗಿ ಜೀವನ ನಡೆಸುವುದು ಇನ್ನೂ ಶ್ರೇಷ್ಠ’ ಎಂದು ನ್ಯಾ. ಪದ್ಮರಾಜ ದೇಸಾಯಿ ಹೇಳಿದರು.

ಸಾಹಿತಿ ಹಂ.ಪ. ನಾಗರಾಜಯ್ಯ, ‘ಸಾಮಾಜಿಕ ಕಾರ್ಯಗಳಲ್ಲಿ ಧರ್ಮದ ಕಾರ್ಯವನ್ನೂ ಮಾಡುವ ಕೆಲಸವಾಗಬೇಕು. ಎಲ್ಲ ಧರ್ಮಗಳನ್ನು ಸಮಾನ, ಸಹಿಷ್ಣುತೆಯಿಂದ ಕಾಣುವ ವರು ನಮ್ಮ ನಡುವೆ ಇದ್ದಾರೆ. ಅಂತ ಹವರನ್ನು ನಾವು ಆದರ್ಶವಾಗಿ ಸ್ವೀಕರಿ ಸಬೇಕು. ಆದರ್ಶಗಳನ್ನು ಕಲಿಯಲು ಪುಸ್ತಕ ಓದಬೇಕಿಲ್ಲ. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಅವರ ಕುಟುಂಬವೇ ಒಂದು ಆದರ್ಶ’ ಎಂದರು.

ADVERTISEMENT

ಪ್ರಶಸ್ತಿ ಪುರಸ್ಕೃತೆ ಅನಿತಾ ಸುರೇಂದ್ರ ಕುಮಾರ್, ‘ಧರ್ಮಸ್ಥಳದ ಮೇಲಿನ ಪ್ರೀತಿಯಿಂದ ಎಲ್ಲರೂ ನನ್ನ ಸಾಮಾಜಿಕ, ಧಾರ್ಮಿಕ ಕಾರ್ಯಕ್ಕೆ ಸಹಕರಿಸಿದ್ದಾರೆ. ಜೈನ ಪರಂಪರೆ ದೊಡ್ಡದು ಹಾಗೂ ಅದ್ಭುತವಾದದ್ದಾಗಿದೆ. ನಮ್ಮ ಯುವಜನಾಂಗ ಮಹಾನುಭವರ ಆದರ್ಶ, ಚಿಂತನೆಗಳಿಂದ ದೂರು ವಾಗದಂತೆ ನೋಡಿಕೊಳ್ಳಬೇಕು. ಈ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

108 ಶ್ರೀ ಅಮೋಘಕೀರ್ತಿ ಮುನಿಮಹಾರಾಜರು ಹಾಗೂ 108 ಶ್ರೀ ಅಮರಕೀರ್ತಿ ಮುನಿಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಇದೇ ವೇಳೆ ಪಿಯುಸಿಯಲ್ಲಿ ಶೇ 90ಕ್ಕಿಂತ ಅಧಿಕ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ 92ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.