ADVERTISEMENT

ನ. 14ರೊಳಗೆ ನೆಹರೂ ಪ್ರತಿಮೆ ಪುನರ್‌ಸ್ಥಾಪನೆ

ಕಾಂಗ್ರೆಸ್‌ ಸದಸ್ಯರ ಧರಣಿ: ಸರ್ಕಾರ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 22:39 IST
Last Updated 23 ಸೆಪ್ಟೆಂಬರ್ 2020, 22:39 IST

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿದ್ದ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಪ್ರತಿಮೆಯನ್ನು ಅವರ ಜನ್ಮದಿನದ (ನವೆಂಬರ್‌ 14) ಒಳಗಾಗಿ ಪುನರ್‌ ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಬುಧವಾರ ವಿಧಾನ ಪರಿಷತ್‌ನಲ್ಲಿ ಭರವಸೆ ನೀಡಿದೆ.

ವಿಧಾನಸೌಧದ ಆಗ್ನೇಯ ಪ್ರವೇಶ ದ್ವಾರದಲ್ಲಿದ್ದ ನೆಹರೂ ಪ್ರತಿಮೆಯನ್ನು ಮೆಟ್ರೊ ರೈಲು ಕಾಮಗಾರಿ ಕಾರಣದಿಂದ ವಾಯವ್ಯ ಮೂಲೆಗೆ ಸ್ಥಳಾಂತರ ಮಾಡಲಾಗಿತ್ತು. ಹಲವು ವರ್ಷಗಳಿಂದ ಪ್ರತಿಮೆ ಅಲ್ಲಿಯೇ ಇದೆ. ಸದನದಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದ ಕಾಂಗ್ರೆಸ್‌ ಸದಸ್ಯ ಕೆ. ಗೋವಿಂದರಾಜು, ತಕ್ಷಣ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಪುನರ್‌ ಸ್ಥಾಪಿಸುವಂತೆ ಮನವಿ ಮಾಡಿದರು.

ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು. ಇದು ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ‘2017ರಲ್ಲೇ ಮುಖ್ಯಮಂತ್ರಿ ಆದೇಶ ನೀಡಿದ್ದರು. ನಿರಂತರವಾಗಿ ಪತ್ರ ಬರೆಯುತ್ತಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಗೋವಿಂದರಾಜು ದೂರಿದರು.

ADVERTISEMENT

ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ‘ದೇಶಕ್ಕೆ ಯಾವುದೇ ಕೊಡುಗೆ ನೀಡದವರು, ಸಂವಿಧಾನದ ವಿರುದ್ಧ ಇದ್ದವರ ಹೆಸರುಗಳನ್ನು ನಾಮಕರಣ ಮಾಡುತ್ತಿದ್ದೀರಿ. ಆಧುನಿಕ ಭಾರತಕ್ಕೆ ಅಡಿಗಲ್ಲು ಹಾಕಿದ ನೆಹರೂ ಪ್ರತಿಮೆ ಪುನರ್‌ ಸ್ಥಾಪನೆಗೆ ಏಕೆ ಅಸಡ್ಡೆ’ ಎಂದು ಪ್ರಶ್ನಿಸಿದರು.

ನ.14ರೊಳಗೆ ಪ್ರತಿಮೆ ಪುನರ್‌ ಸ್ಥಾಪಿಸುವಂತೆ ಕಾಂಗ್ರೆಸ್‌ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ಮುಖ್ಯಮಂತ್ರಿ ಜತೆ ಚರ್ಚಿಸಿ ಉತ್ತರ ನೀಡುವುದಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು. ಬಳಿಕ ಕಾಂಗ್ರೆಸ್‌ ಸದಸ್ಯರು ಧರಣಿ ಹಿಂಪಡೆದರು.

ಮಧ್ಯಾಹ್ನದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಉತ್ತರಿಸಿದ ಮಾಧುಸ್ವಾಮಿ, ‘ಮುಖ್ಯಮಂತ್ರಿಯವರ ಜತೆ ಚರ್ಚಿಸಿದ್ದೇನೆ. ನ.14ರೊಳಗೆ ನೆಹರೂ ಅವರ ಪ್ರತಿಮೆ ಪುನರ್‌ ಸ್ಥಾಪನೆ ಮಾಡಲಾಗುವುದು’ ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.