
ಬೆಂಗಳೂರು: ಭಾರತೀಯ ಜ್ಞಾನ ವ್ಯವಸ್ಥೆಯ ಹೆಸರಿನಲ್ಲಿ ತರ್ಕಹೀನ ಅವೈಜ್ಞಾನಿಕ ಪಠ್ಯಕ್ರಮವನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸದೇ ಅಪ್ರಜಾತಾಂತ್ರಿಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ–2020 ಜಾರಿ ಮಾಡಿದೆ ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ಹೇಳಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್ಇಸಿ) ಶನಿವಾರ ಹಮ್ಮಿಕೊಂಡಿದ್ದ ಎನ್‌ಇಪಿ–2020ಕ್ಕೆ ಪರ್ಯಾಯ ಜನಪರ ಶಿಕ್ಷಣ ನೀತಿಗಾಗಿ ‘ಜನ ಸಂಸತ್ತು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ನಿರಪೇಕ್ಷ ತತ್ವದಡಿ ಬೋಧನೆ ಇರಬೇಕು. ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿರಬಾರದು ಎಂದು ಸಂವಿಧಾನದ 28ನೇ ವಿಧಿ ಹೇಳುತ್ತದೆ. ದೇಶದಲ್ಲಿ ಕನ್ನಡ, ತೆಲುಗು, ತಮಿಳು ಸೇರಿದಂತೆ ಅನೇಕ ಭಾಷಾ ಬೋಧನಾ ಕಾಲೇಜುಗಳಿವೆ. ಅಲ್ಲಿ ಭಾಷೆಗೆ ಸಂಬಂಧಿಸಿದ ಅಧ್ಯಯನಗಳಿವೆ. ಆದರೆ, ಸಂಸ್ಕೃತ ಕಾಲೇಜುಗಳು, ಮಹಾವಿದ್ಯಾಲಯಗಳು ಮಾತ್ರ ಧರ್ಮ ನಿರಪೇಕ್ಷ ನಿಯಮವನ್ನು ಉಲ್ಲಂಘಿಸುತ್ತಿವೆ. ಭಾಷೆಯ ಜೊತೆಗೆ ಧರ್ಮವನ್ನೂ ಬೋಧಿಸುತ್ತಿದೆ ಎಂದು ಆರೋಪಿಸಿದರು.
1990ರ ನಂತರದ ಖಾಸಗೀಕರಣದಿಂದಾಗಿ ಶೈಕ್ಷಣಿಕ ಅಸಮಾನತೆ ಹೆಚ್ಚುತ್ತಿದೆ. ಸುಮಾರು ಶೇ 67 ಸಂಸ್ಥೆಗಳು ಸ್ವಯಂ-ಹಣಕಾಸು ಮತ್ತು ಖಾಸಗಿ ಸಂಸ್ಥೆಗಳಾಗಿ ಮಾರ್ಪಟ್ಟಿವೆ. ಹೆಚ್ಚುತ್ತಿರುವ ಶೈಕ್ಷಣಿಕ ಶುಲ್ಕದಿಂದಾಗಿ, ಶೇ 22ರಷ್ಟು ಬಡ ವಿದ್ಯಾರ್ಥಿಗಳು ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ, ಸಾರ್ವತ್ರಿಕ ಶಿಕ್ಷಣ ಎಂಬುದು ಮರೀಚಿಕೆಯಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಸಂಸದ ಜವಾಹರ್ ಸರ್ಕಾರ್ ಮಾತನಾಡಿ, ಶಿಕ್ಷಣದಲ್ಲಿ ಕೇಂದ್ರೀಕರಣ, ಕಾರ್ಪೊರೇಟೀಕರಣ, ಕೋಮುವಾದ ಮತ್ತು ಭ್ರಷ್ಟಾಚಾರವನ್ನು ತುರುಕಲು ರಾಷ್ಟ್ರೀಯ ಶಿಕ್ಷಣ ನೀತಿ–2020ಅನ್ನು ಜಾರಿಗೆ ತಂದಿದೆ. ಇದರ ವಿರುದ್ಧ ನಿರಂತರ ಹೋರಾಟ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಿಧ ಗೋಷ್ಠಿ: ಜನಪರ ಶಿಕ್ಷಣ ನೀತಿಗಾಗಿ ವಿವಿಧ ಗೋಷ್ಠಿಗಳು ನಡೆದವು. ಎಐಎಸ್ಇಸಿ ಅಧ್ಯಕ್ಷ ಪ್ರಕಾಶ್ ಎನ್., ಸ್ವಾಗತ ಸಮಿತಿ ಅಧ್ಯಕ್ಷ ಮುರಿಗೆಪ್ಪ, ಶಿಕ್ಷಣ ತಜ್ಞರಾದ ಅರುಣಕುಮಾರ್, ಆದಿತ್ಯ ಮುಖರ್ಜಿ, ನಿರಂಜನಾರಾಧ್ಯ ವಿ.ಪಿ, ಆರ್. ಮಹಾಲಕ್ಷ್ಮೀ, ಎ.ಎಚ್. ರಾಜಾಸಾಬ್, ಫ್ರಾನ್ಸಿಸ್ ಅಸ್ಸಿಸಿ, ಅಲ್ಮೇಡಾ, ಜವಾಹರ್ ನೇಸನ್, ಮಹಾಬಲೇಶ್ವರ ರಾವ್ ಸಹಿತ ಅನೇಕರು ಭಾಗವಹಿಸಿದ್ದರು.
ಶತಮಾನಕ್ಕೂ ಹಳೆಯ ಸಿದ್ಧಾಂತ ಪ್ರತಿಪಾದನೆ: ಪುನಿಯಾನಿ
‘ಕೇಂದ್ರ ಸರ್ಕಾರವು ಸಾಮಾಜಿಕ ಅಸಮಾನತೆಯನ್ನು ಆಳಗೊಳಿಸಲು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲು ಹವಣಿಸುತ್ತಿರುವ ಶತಮಾನದಷ್ಟು ಹಳೆಯದಾದ ರಾಜಕೀಯ ಸಿದ್ಧಾಂತವನ್ನು ಪ್ರತಿನಿಧಿಸುತ್ತಿದೆ’ ಎಂದು ಐಐಟಿ ಮುಂಬೈನ ನಿವೃತ್ತ ಪ್ರಾಧ್ಯಾಪಕ ರಾಮ್ ಪುನಿಯಾನಿ ಹೇಳಿದರು. ‘
ವೈಜ್ಞಾನಿಕ ಮನೋಭಾವ ಮತ್ತು ತರ್ಕಬದ್ಧ ಚಿಂತನೆಯ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ‘ಗುಣಮಟ್ಟದ ಶಿಕ್ಷಣವನ್ನು ಉಳ್ಳವರಿಗಾಗಿ ಮೀಸಲಿಡುತ್ತಾ ಸಾರ್ವಜನಿಕ ಶಾಲೆಗಳನ್ನು ಮುಚ್ಚುತ್ತಿದೆ ಮತ್ತು ಸಾವಿರಾರು ಶಿಕ್ಷಕರ ಹುದ್ದೆಗಳನ್ನು ಖಾಲಿ ಉಳಿಸುತ್ತಿದೆ. ಪಠ್ಯಪುಸ್ತಕಗಳಿಂದ ಕಾಲಾನುಕ್ರಮ ಕೋಷ್ಟಕ ಮತ್ತು ವಿಕಾಸವಾದದ ಸಿದ್ಧಾಂತವನ್ನು ತೆಗೆದು ಹಾಕುತ್ತಿದೆ. ಸ್ಥಾಪಿತ ವೈಜ್ಞಾನಿಕ ಅಡಿಪಾಯಗಳನ್ನು ಕುಗ್ಗಿಸಿ ಅದರ ಬದಲಿಗೆ ಅವೈಜ್ಞಾನಿಕ ಗುರುಕುಲ ಮಾದರಿಯನ್ನು ಹೇರುತ್ತಿದೆ’ ಎಂದು ವಿಶ್ಲೇಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.