
ಕಾರ್ಯಕ್ರಮದಲ್ಲಿ ವಿ.ಎನ್. ರಾಜಶೇಖರ್ ಮತ್ತು ಆದಿತ್ಯ ಮುಖರ್ಜಿ ಸಮಾಲೋಚನೆ ನಡೆಸಿದರು. ಮೃದುಲಾ ಮುಖರ್ಜಿ, ಅಲ್ಲಮಪ್ರಭು ಬೆಟ್ಟದೂರು, ಸುಮಿತ್ರೊ ಬ್ಯಾನರ್ಜಿ, ಎ. ಮುರಿಗೆಪ್ಪ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹೆಸರಿನಲ್ಲಿ ನೈಜ ಇತಿಹಾಸವನ್ನು ಬದಲಾಯಿಸಲಾಗುತ್ತಿದೆ’ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ನಿವೃತ್ತ ಪ್ರಾಧ್ಯಾಪಕ ಮತ್ತು ಇತಿಹಾಸಕಾರ ಆದಿತ್ಯ ಮುಖರ್ಜಿ ಕಳವಳ ವ್ಯಕ್ತಪಡಿಸಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಮತ್ತು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಇತಿಹಾಸ ವಿಭಾಗ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಇತಿಹಾಸ ಬೋಧನೆಯಲ್ಲಿ ವೈಜ್ಞಾನಿಕ ದೃಷ್ಟಿಕೋನ’ ವಿಷಯದ ಮೇಲಿನ ಸಂವಾದದಲ್ಲಿ ಭಾಗವಹಿಸಿ, ಮಾತನಾಡಿದರು.
‘1857ಕ್ಕಿಂತ ಮೊದಲು ಈ ದೇಶದಲ್ಲಿ ಕೋಮುವಾದಿ ಚಿಂತನೆಗಳು ಇರಲಿಲ್ಲ. ಇಂದು ಎಲ್ಲ ವಿಷಯಗಳಲ್ಲೂ ವಸಾಹತುಶಾಹಿ ಮತ್ತು ಕೋಮುವಾದಿ ಚಿಂತನೆಗಳಿವೆ. ರಾಷ್ಟ್ರೀಯತೆಯ ಹೆಸರಿನಲ್ಲಿ ವಸಾಹತುಶಾಹಿ ಧೋರಣೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಇತಿಹಾಸವನ್ನು ಮಾಧ್ಯಮಗಳ ವರದಿಯ ಆಧಾರದ ಮೇಲೆ ಬರೆಯುವ ಸನ್ನಿವೇಶ ಈಗ ಸೃಷ್ಟಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ದೇಶದಲ್ಲಿ ಕೋಮುವಾದ ಬೆಳೆಯುತ್ತಿದೆ. ಎಲ್ಲ ಮುಸ್ಲಿಮರನ್ನು ವಲಸಿಗರು ಎಂದು ಅಧಾರ ರಹಿತವಾಗಿ ಆರೋಪಿಸಲಾಗುತ್ತಿದೆ. ಅವರ ಮೇಲೆ ದ್ವೇಷ ಬಿತ್ತುವ ಮೂಲಕ ರಾಜಕೀಯ ಮಾಡಲಾಗುತ್ತಿದೆ. ಇದರ ವಿರುದ್ಧ ಎಲ್ಲರೂ ಧ್ವನಿಯೆತ್ತಬೇಕಿದೆ. ಭಾರತದ ಬೌದ್ಧಿಕತೆ ಜಾಗೃತವಾಗಬೇಕಿದೆ’ ಎಂದರು.
ಕೋಲ್ಕತ್ತದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನ (ಐಐಎಸ್‌ಇಆರ್) ನಿವೃತ್ತ ವಿಜ್ಞಾನಿ ಸುಮಿತ್ರೊ ಬ್ಯಾನರ್ಜಿ, ‘ಇತಿಹಾಸವು ಸತ್ಯ ಸಂಶೋಧನಾ ಪ್ರಕ್ರಿಯೆಯ ಒಂದು ವಿಜ್ಞಾನವಾಗಿದೆ. ಆಧಾರ ರಹಿತವಾಗಿ ಇದನ್ನು ಬೋಧಿಸಬಾರದು. ಐತಿಹಾಸಿಕ ಸಂಗತಿಗಳನ್ನು ಸಂಗ್ರಹಿಸಿ, ವೈಜ್ಞಾನಿಕ ಸತ್ಯವನ್ನು ಪ್ರತಿಪಾದಿಸಬೇಕು’ ಎಂದು ಹೇಳಿದರು.
ಇತಿಹಾಸ ತಜ್ಞೆ ಮೃದುಲಾ ಮುಖರ್ಜಿ, ‘ಆಂಧ್ರ ಪ್ರದೇಶ ಸರ್ಕಾರವು ಇತಿಹಾಸ ಶಿಕ್ಷಕ ಮತ್ತು ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನೇ ಕೈಬಿಟ್ಟಿದೆ. ಬಹುತೇಕ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೂಡಾ ಇತಿಹಾಸ ವಿಷಯವನ್ನು ನಿರ್ಲಕ್ಷಿಸುತ್ತಿವೆ. ಬಾಬರಿ ಮಸೀದಿ ಕೆಡವಿ ರಾಮ ಮಂದಿರ ಕಟ್ಟುವುದರ ಮೂಲಕ ರಾಜಕಾರಣಿಗಳು ಇತಿಹಾಸ ಬರೆಯುತ್ತಿದ್ದಾರೆ. ಆದರೆ, ಇತಿಹಾಸಕಾರರು ಸುಮ್ಮನಿರುವುದು ದೇಶದ ದುರಂತ’ ಎಂದರು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ‘ಬಹುತ್ವವನ್ನು ಉಸಿರಾಡುವ ನಮ್ಮ ದೇಶದಲ್ಲಿ ಏಕತ್ವ ಹೇರುವ ಸನ್ನಿವೇಶದಲ್ಲಿ ನಾವಿದ್ದೇವೆ. ಮನುವಾದವನ್ನು ನಾವು ವೈಚಾರಿಕವಾಗಿ ಮುಗಿಸಬೇಕೇ ಹೊರತು ಭೌತಿಕವಾಗಿ ಅಲ್ಲ’ ಎಂದರು.
ನಿವೃತ್ತ ಕುಲಪತಿ ಎ. ಮುರಿಗೆಪ್ಪ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಫ್ರಾನ್ಸಿಸ್ ಅಸ್ಸಿಸಿ ಅಲ್ಮೆಡಾ, ಎಐಎಸ್‌ಇಸಿ ರಾಜ್ಯ ಉಪಾಧ್ಯಕ್ಷ ವಿ.ಎನ್. ರಾಜಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.