ADVERTISEMENT

ರಾಜ್ಯಕ್ಕೂ ಕಾಲಿಟ್ಟ ಬ್ರಿಟನ್‌ ವೈರಸ್‌; ನಾಪತ್ತೆಯಾದವರ ಪತ್ತೆ ಕಾರ್ಯ ಚುರುಕು

6 ವರ್ಷದ ಹೆಣ್ಣುಮಗು ಸೇರಿ ಮೂವರಿಗೆ ಯುಕೆ ರೂಪಾಂತರ ಸೋಂಕು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 20:06 IST
Last Updated 29 ಡಿಸೆಂಬರ್ 2020, 20:06 IST
ಬ್ರಿಟನ್‌ ರೂಪಾಂತರ ಸೋಂಕು ತಗುಲಿರುವ ತಾಯಿ ಮತ್ತು ಮಗು ವಾಸವಿದ್ದ ಬೆಂಗಳೂರಿನ ವಿಠ್ಠಲನಗರದ ಅಪಾರ್ಟ್‌ಮೆಂಟ್‌ ಅನ್ನು ಬಿಬಿಎಂಪಿ ಸಿಬ್ಬಂದಿ ಸೋಮವಾರ ಸೀಲ್‌ಡೌನ್‌ ಮಾಡಿದರು ಪ್ರಜಾವಾಣಿ ಚಿತ್ರ ಪುಷ್ಕರ್ ವಿ.
ಬ್ರಿಟನ್‌ ರೂಪಾಂತರ ಸೋಂಕು ತಗುಲಿರುವ ತಾಯಿ ಮತ್ತು ಮಗು ವಾಸವಿದ್ದ ಬೆಂಗಳೂರಿನ ವಿಠ್ಠಲನಗರದ ಅಪಾರ್ಟ್‌ಮೆಂಟ್‌ ಅನ್ನು ಬಿಬಿಎಂಪಿ ಸಿಬ್ಬಂದಿ ಸೋಮವಾರ ಸೀಲ್‌ಡೌನ್‌ ಮಾಡಿದರು ಪ್ರಜಾವಾಣಿ ಚಿತ್ರ ಪುಷ್ಕರ್ ವಿ.   

ಬೆಂಗಳೂರು: ರಾಜ್ಯದಲ್ಲಿ 34 ವರ್ಷದ ಮಹಿಳೆ ಮತ್ತು ಅವರ ಆರು ವರ್ಷದ ಮಗಳು ಸೇರಿದಂತೆ ಮೂವರಿಗೆ ಬ್ರಿಟನ್‌ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ ಮೂಲಕ ರೂಪಾಂತರಗೊಂಡ ವೈರಸ್‌ ಕೂಡ ರಾಜ್ಯಕ್ಕೆ ಕಾಲಿಟ್ಟಂತಾಗಿದೆ.

ಲಂಡನ್‌ನ ಹೀಥ್ರೂ ನಿಲ್ದಾಣದಿಂದ ಬ್ರಿಟಿಷ್‌ ಏರ್‌ವೈಸ್‌ನ ವಿಮಾನದಲ್ಲಿ (ಬಿಎ0119) ಡಿ.18ರಂದು ಹೊರಟಿದ್ದ ತಾಯಿ ಮತ್ತು ಮಗಳು ಡಿ.19ರ ಬೆಳಿಗ್ಗೆ 5ಕ್ಕೆ ನಗರಕ್ಕೆ ಬಂದಿದ್ದರು. ಮಹಿಳೆಗೆ ಶೀತ ಮಾತ್ರ ಇತ್ತು. ಆದರೆ, ಅವರ ಪತಿ ಮತ್ತು ಮಗಳಿಗೆ ಕೋವಿಡ್‌ನ ಯಾವುದೇ ಲಕ್ಷಣಗಳಿರಲಿಲ್ಲ. ಮಗು ಡಿ.19ರಂದು ಆ್ಯಂಟಿಜೆನ್‌ ಪರೀಕ್ಷೆ ಮಾಡಿಸಿಕೊಂಡಿದ್ದರೆ, ಮಹಿಳೆ 20ರಂದು ಅಪೊಲೊ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು. ನಂತರ, ತಾಯಿ ಮತ್ತು ಮಗುವನ್ನು ಡಿ.22ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

29 ಜನಕ್ಕೆ ಕೋವಿಡ್‌: ಡಿ.29ರವರೆಗೆ, ಇಂಗ್ಲೆಂಡ್‌ನಿಂದ ಬಂದ 2,127 ಪ್ರಯಾಣಿಕರ ಪೈಕಿ 1,903 ಮಂದಿಯನ್ನು ಪತ್ತೆ ಮಾಡಿ ಪರೀಕ್ಷೆಗೊಳಪಡಿಸಲಾಗಿತ್ತು. ಮಂಗಳವಾರ ಹೊಸದಾಗಿ ಎರಡು ಪ್ರಕರಣಗಳು ಸೇರಿದಂತೆ ಒಟ್ಟು 29 ಮಂದಿಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ. 1,599 ಮಂದಿಯ ವರದಿ ನೆಗೆಟಿವ್ ಬಂದಿದೆ. 275 ಜನರ ವರದಿ ಇನ್ನೂ ಬರಬೇಕಿದೆ. ಇವರಿಗೆ ಸೋಂಕು ತಗುಲಿರುವುದು ಬ್ರಿಟನ್ ರೂಪಾಂತರವೇ ಎಂಬುದನ್ನು ತಿಳಿಯಲು ನಿಮ್ಹಾನ್ಸ್ ನಲ್ಲಿ ವಂಶವಾಹಿ ಪರೀಕ್ಷೆ ನಡೆಯುತ್ತಿದೆ.

ADVERTISEMENT

‘ತಾಯಿ ಮತ್ತು ಮಗು ಸೇರಿ ಮೂವರಿಗೆ ಬ್ರಿಟನ್‌ ರೂಪಾಂತರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೂರನೇ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸೋಂಕಿತರ ಜತೆಗಿನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಂಗಳವಾರ ತಿಳಿಸಿದರು.

ತಾಯಿ ಮತ್ತು ಮಗು ವಾಸವಿದ್ದ ವಿಠ್ಠಲ ನಗರದ ಅಪಾರ್ಟ್‌ಮೆಂಟ್‌ ಸೀಲ್‌ಡೌನ್‌ ಮಾಡಲಾಗಿದೆ. ಎಲ್ಲ 37 ನಿವಾಸಿಗಳನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

48 ಗಂಟೆಗಳಲ್ಲಿ ಪತ್ತೆ: 'ಇಂಗ್ಲೆಂಡ್‌ನಿಂದ ಬಂದ ಉಳಿದ 247 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಕ್ರಮ ಕೈಗೊಳ್ಳುವುದರ ಬಗ್ಗೆ ಗೃಹಸಚಿವರೊಂದಿಗೆ ಚರ್ಚಿಸಿದ್ದೇನೆ. ರಾಜ್ಯಕ್ಕೆ ಬಂದ ಬಳಿಕ ಅವರ ಫೋನ್‌ಗಳು ಸ್ವಿಚ್ಡ್‌ ಆಫ್‌ ಆಗಿವೆ. ಆದರೂ, ಮುಂದಿನ 48 ಗಂಟೆಯೊಳಗೆ ಎಲ್ಲರನ್ನೂ ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದು ಡಾ.ಸುಧಾಕರ್ ತಿಳಿಸಿದರು.

'ನಾಪತ್ತೆಯಾದವರು ಮತ್ತು ಅವರ ಸಂಪರ್ಕಕ್ಕೆ ಬಂದವರ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ನಾನು‌ ಮನವಿ ಮಾಡುತ್ತೇನೆ. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ' ಎಂದು ಅವರು ಎಚ್ಚರಿಸಿದರು.

ಲಾಕ್‌ಡೌನ್‌ ಅಗತ್ಯವಿಲ್ಲ: 'ಮತ್ತೆ ಲಾಕ್ ಡೌನ್ ಅಗತ್ಯವಿಲ್ಲ. ಈಗ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಸಾವಿರಾರು ಜನರ ಪೈಕಿ ಕೇವಲ ಮೂವರಿಗೆ ರೂಪಾಂತರ ಸೋಂಕು ತಗುಲಿದೆ. ಎಲ್ಲರನ್ನೂ ಐಸೋಲೇಷನ್ ಮಾಡಿದ್ದೇವೆ. ಸೋಂಕು ಹರಡದಂತೆ ಎಚ್ಚರ ವಹಿಸಿರುವುದರಿಂದ ಮತ್ತೆ ಲಾಕ್ ಡೌನ್, ಸೀಲ್ ಡೌನ್ ಅವಶ್ಯಕತೆ ಇಲ್ಲ' ಎಂದರು.

ಶಾಲೆ ಪುನರಾರಂಭ: ‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ತರಗತಿಗಳು ನಿಗದಿಯಂತೆ ಪುನರಾರಂಭವಾಗುತ್ತವೆ. 6ರಿಂದ 9ನೇ ತರಗತಿ‌ಯ ಮಕ್ಕಳಿಗೆ ವಿದ್ಯಾಗಮವೂ ನಡೆಯುತ್ತದೆ' ಎಂದೂ ಅವರು ಹೇಳಿದರು.

ಫೆಬ್ರುವರಿಗೆ ಎರಡನೇ ಅಲೆ?
‘ದೇಶದಲ್ಲಿ ಫೆಬ್ರುವರಿ ವೇಳೆಗೆ ಕೊರೊನಾ ಸೋಂಕಿನ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇಂಗ್ಲೆಂಡ್‌ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾದ 40ರಿಂದ 60 ದಿನಗಳ ನಂತರ ಎರಡನೇ ಅಲೆ ಕಾಣಿಸಿಕೊಂಡಿದೆ. ಅದರಂತೆ ನಮ್ಮ ದೇಶದಲ್ಲಿಯೂ ಎರಡನೇ ಅಲೆ ಆರಂಭವಾಗಬಹುದು ಎಂಬ ಬಗ್ಗೆ ವರದಿಗಳು ಬರುತ್ತಿವೆ’ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ, ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ರಿಟನ್‌ನಲ್ಲಿ ಸೆಪ್ಟೆಂಬರ್‌ನಲ್ಲೇ ಈ ರೂಪಾಂತರ ಸೋಂಕು ಕಾಣಿಸಿಕೊಂಡಿದೆ. ಕೋವಿಡ್‌ಗೆ ನೀಡಬಹುದಾದ ಚಿಕಿತ್ಸೆ, ಲಸಿಕೆಯನ್ನು ಇವರಿಗೂ ನೀಡಲಾಗುತ್ತದೆ. ಬ್ರಿಟನ್‌ನಿಂದ ಬಂದವರನ್ನು ನಿಯಮಿತವಾಗಿ ಆರ್‌ಟಿ‍–ಪಿಸಿಆರ್‌ ‍‍ಪರೀಕ್ಷೆಗೆ ಒಳಪಡಿಸಬೇಕು’ ಎಂದು ಸಲಹೆ ನೀಡುತ್ತಾರೆ. ‘ಕೊರೊನಾ ವೈರಸ್‌ ರೂಪಾಂತರಗೊಳ್ಳುತ್ತಲೇ ಇರುತ್ತದೆ. ಕೊರೊನಾ ಆಟ ಮುಗಿದಿಲ್ಲ. ಮೊದಲ ‘ಇನ್ನಿಂಗ್ಸ್’ ಮುಕ್ತಾಯದ ನಂತರ, ಎರಡನೇ ‘ಇನ್ನಿಂಗ್ಸ್‌’ ಪ್ರಾರಂಭವಾಗಲಿದೆ’ ಎಂದರು.

‘ಮಾಹಿತಿ ಇದ್ದರೂ ಸರ್ಕಾರದ ನಿರ್ಲಕ್ಷ್ಯ’
‘ಬ್ರಿಟನ್‌ನಲ್ಲಿ ಕೊರೊನಾ ರೂಪಾಂತರ ಸೋಂಕು ಎರಡು ತಿಂಗಳ ಹಿಂದೆಯೇ ಕಾಣಿಸಿಕೊಂಡಿತ್ತು. ದೇಶಕ್ಕೂ ಹರಡುವ ಮಾಹಿತಿಯೂ ಇದ್ದರೂ ಇಂಗ್ಲೆಂಡ್‌ನಿಂದ ಬಂದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸಿತು’ ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ದೂರಿದರು.

‘ವಿದೇಶಗಳಿಂದ ಬಂದವರನ್ನು ಸರಿಯಾಗಿ ಕ್ವಾರಂಟೈನ್‌ಗೆ ಒಳಪಡಿಸದೆ ಇದ್ದುದೇ ಸೋಂಕು ಹರಡಲು ಕಾರಣವಾಗಿತ್ತು. ಕೇಂದ್ರ ಮತ್ತು ರಾಜ್ಯಸರ್ಕಾರ ಈ ಬಾರಿಯೂ ತಪ್ಪು ಮುಂದುವರಿಸಿದೆ. ಕೋವಿಡ್‌ ಹೆಸರಿನಲ್ಲಿ ಹಣ ದೋಚುವ ಕಡೆಗೆ ಸರ್ಕಾರದ ಗಮನ ಇದೆ, ಜನರ ಜೀವರಕ್ಷಣೆಯತ್ತ ಇಲ್ಲ’ ಎಂದರು. ‘ವಿದೇಶಗಳಿಂದ ಬಂದವರು ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡರೆ ಏನು ಮಾಡುವುದು ಎಂದು ಆರೋಗ್ಯ ಸಚಿವರು ಬೇಜವಾಬ್ದಾರಿಯಾಗಿ ಹೇಳುತ್ತಾರೆ. ಅವರು ಬರುತ್ತಿದ್ದಂತೆ ಮೊಬೈಲ್‌ ಸಂಖ್ಯೆ ಪರಿಶೀಲಿಸಬೇಕಿತ್ತು. ತಂತ್ರಜ್ಞಾನ ಬಳಸುವಲ್ಲಿಯೂ ಸರ್ಕಾರಗಳು ವಿಫಲವಾಗುತ್ತಿವೆ’ ಎಂದು ದೂರಿದರು.

ಅಣಕು ಲಸಿಕೆ ಕಾರ್ಯಕ್ರಮ
ದೇಶದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮ ಜಾರಿ ಕುರಿತಂತೆ ಎರಡು ದಿನಗಳ ಅಣಕು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಆಂಧ್ರಪ್ರದೇಶದ ಕೃಷ್ಣಾ, ಗುಜರಾತ್‌ನ ರಾಜಕೋಟ್ ಮತ್ತು ಗಾಂಧಿನಗರ, ಪಂಜಾಬ್‌ನ ಲುಧಿಯಾನ ಮತ್ತು ಶಹೀದ್ ಭಗತ್ ಸಿಂಗ್ ನಗರ, ಅಸ್ಸಾಂನ ಸೋನಿತ್‌ಪುರ ಮತ್ತು ನಲಬಾರಿ ಜಿಲ್ಲೆಗಳಲ್ಲಿ ಈ ಅಣಕು ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.