ADVERTISEMENT

ಹೊಸ ವರ್ಷಕ್ಕೆ ಆಟೊ ಪ್ರಯಾಣ ದರ ಹೆಚ್ಚಳ?

ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ ಆಟೊ ಚಾಲಕರು: ಜನವರಿ ಸಭೆಯಲ್ಲಿ ಪ್ರಸ್ತಾಪದ ಭರವಸೆ

ಸಂತೋಷ ಜಿಗಳಿಕೊಪ್ಪ
Published 28 ಡಿಸೆಂಬರ್ 2018, 19:43 IST
Last Updated 28 ಡಿಸೆಂಬರ್ 2018, 19:43 IST
ಬ್ರಿಗೇಡ್ ರಸ್ತೆಯ ಪ್ರೀಪೆಯ್ಡ್ ಆಟೋ ನಿಲ್ದಾಣ - ಪ್ರಜಾವಾಣಿ ಚಿತ್ರ
ಬ್ರಿಗೇಡ್ ರಸ್ತೆಯ ಪ್ರೀಪೆಯ್ಡ್ ಆಟೋ ನಿಲ್ದಾಣ - ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಆಟೊ ಪ್ರಯಾಣ ದರ ಪರಿಷ್ಕರಣೆ ಮಾಡಲು ಚಾಲಕರಿಂದ ಒತ್ತಡ ಹೆಚ್ಚಾಗಿದ್ದು, ಬರುವ ಜನವರಿಯಲ್ಲಿ ಜರುಗಲಿರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಪರಿಷ್ಕರಣೆ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಅನಿಲ, ತೈಲ ಹಾಗೂ ಸಾರಿಗೆ ಇಲಾಖೆ ಶುಲ್ಕಗಳ ದರ ಹೆಚ್ಚಳದಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಆಟೊ ಚಾಲಕರು, ಪ್ರಯಾಣ ದರ ಪರಿಷ್ಕರಣೆ ಮಾಡುವಂತೆ ಪ್ರಾಧಿಕಾರದ ಅಧ್ಯಕ್ಷರೂ ಆದ ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಸ್ಪಂದಿಸಿರುವ ವಿಜಯಶಂಕರ್, ಸಭೆಯ ವಿಷಯಗಳ ಪಟ್ಟಿಯಲ್ಲಿ ದರ ಪರಿಷ್ಕರಣೆ ವಿಷಯವನ್ನೂ ಸೇರಿಸಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಸಭೆಯಲ್ಲಿ ದರ ಪರಿಷ್ಕರಣೆಗೆ ಒಪ್ಪಿಗೆ ಸಿಕ್ಕರೆ, ಆಟೊ ಪ್ರಯಾಣ ದರವೂ ಶೇ 20ರಷ್ಟು ಹೆಚ್ಚಳವಾಗಲಿದೆ.

2013ರಲ್ಲಿ ನಡೆದಿದ್ದ ಪ್ರಾದೇಶಿಕ ಸಾರಿಗೆ‍ಪ್ರಾಧಿಕಾರದ ಸಭೆಯಲ್ಲಿ ಪರಿಷ್ಕರಣೆ ಮಾಡಲಾದ ಪ್ರಯಾಣ ದರವೇ ಇದುವರೆಗೂ ಚಾಲ್ತಿಯಲ್ಲಿದೆ. ಐದು ವರ್ಷವಾದರೂ ದರ ಪರಿಷ್ಕರಣೆ ಮಾಡದಿರುವುದನ್ನು ಪ್ರಶ್ನಿಸುತ್ತಿರುವ ಚಾಲಕರು, 2018ರಲ್ಲಾದರೂ ದರ ಪರಿಷ್ಕರಣೆ ಮಾಡುವಂತೆ
ಒತ್ತಾಯಿಸುತ್ತಿದ್ದಾರೆ.

ADVERTISEMENT

‘ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇಂಥ ಸ್ಥಿತಿಯಲ್ಲಿ ಆಟೊ ಚಾಲಕರು, ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ, ದರ ಪರಿಷ್ಕರಣೆ ಅಗತ್ಯ ಹಾಗೂ ಅನಿವಾರ್ಯವಾಗಿದೆ. ಅದೇ ಕಾರಣಕ್ಕೆ ಅಕ್ಟೋಬರ್ 30ರಂದೇ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಡಿ. 14ರಂದು ಮತ್ತೊಂದು ಮನವಿ ಸಲ್ಲಿಸಿದ್ದು, ದರ ಪರಿಷ್ಕರಣೆಯ ಭರವಸೆ ಸಿಕ್ಕಿದೆ’ ಎಂದು ‘ಬೃಹತ್ ಬೆಂಗಳೂರು ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ’ದ ಅಧ್ಯಕ್ಷ ಜವರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ವರ್ಷಕ್ಕೊಮ್ಮೆ ಅಥವಾ ಅನಿಲ ದರ (ಲೂಬ್ರಿಕೆಂಟ್ಸ್ ಆಯಿಲ್ ಸಹಿತ) ₹70 ದಾಟಿದರೆ, ಆಟೊ ಪ್ರಯಾಣ ದರ ಪರಿಷ್ಕರಣೆ ಮಾಡಬೇಕೆಂದು 2013ರಲ್ಲೇ ನಿಯಮ ರೂಪಿಸಲಾಗಿದೆ. ಈಗ ಅನಿಲ ದರ ₹85 (ಆಯಿಲ್ ಸಹಿತ) ಆಗಿದ್ದರೂ ಪ್ರಾಧಿಕಾರದವರು, ದರ ಪರಿಷ್ಕರಣೆಗೆ ಕ್ರಮ ಕೈಗೊಂಡಿಲ್ಲ. ಈಗ ಚಾಲಕರ ಒತ್ತಡದಿಂದಾಗಿ, ದರ ಪರಿಷ್ಕರಣೆ ಮಾಡುವುದಾಗಿ ಹೇಳುತ್ತಿದ್ದಾರೆ’ ಎಂದು ಹೇಳಿದರು.

ಲಕ್ಷಾಂತರ ಮಂದಿ ಅವಲಂಬನೆ: ‘ಆಟೊ ಎಂಬುದು ಈಗ ಉದ್ಯಮವೆಂದೇ ಹೇಳಬಹುದು. ಇದನ್ನು ನಂಬಿ ಲಕ್ಷಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ಅವರ ಜೀವನಮಟ್ಟ ಸುಧಾರಣೆಗೆ ದರ ಪರಿಷ್ಕರಣೆ ಅಗತ್ಯ’ ಎಂದು ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್ ಕಾರ್ಯಾಧ್ಯಕ್ಷ ಬಿ.ರಾಜಶೇ
ಖರಮೂರ್ತಿ ತಿಳಿಸಿದರು.

‘ಓಲಾ, ಉಬರ್‌ ಕ್ಯಾಬ್ ಕಂಪನಿಗಳು ನಗರದಲ್ಲಿದ್ದರೂ ಆಟೊಗಳ ಬೇಡಿಕೆ ಕಡಿಮೆಯಾಗಿಲ್ಲ. ಬಿಎಂಟಿಸಿ ಬಿಟ್ಟರೆ, ಹೆಚ್ಚು ಜನರು ಸಾರಿಗೆಗೆ ಅವಲಂಬಿಸಿರುವುದು ಆಟೊಗಳನ್ನೇ.ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಮಾಡುವಂತೆ, ಆಟೊ ಪ್ರಯಾಣ ದರವನ್ನು ನಿಗದಿತ ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು’ ಎಂದು ಹೇಳಿದರು.

‘ಬೆಂಗಳೂರಿನಂಥ ನಗರದಲ್ಲಿ ಆಟೊ ಚಾಲಕರು, ದಟ್ಟಣೆಯಲ್ಲಿ ಸಿಲುಕಿದಾಗಲೆಲ್ಲ ನರಕಯಾತನೆ ಅನುಭವಿಸುತ್ತಿದ್ದಾರೆ. ಅನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ. ಎಷ್ಟೇ ಕಷ್ಟವಿದ್ದರೂ ಕುಟುಂಬದ ನಿರ್ವಹಣೆಗಾಗಿ ಆಟೊ ಓಡಿಸುತ್ತಿದ್ದಾರೆ. ಅವರ ಜೀವನಕ್ಕೆ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಜನವರಿ 8 ಮತ್ತು 9ರಂದು ದೇಶದಾದ್ಯಂತ ನಡೆಯಲಿರುವ ಮುಷ್ಕರಕ್ಕೆ ನಾವೂ ಬೆಂಬಲ ನೀಡುತ್ತಿದ್ದು, ಆಟೊ ಪ್ರಯಾಣ ದರ ಪರಿಷ್ಕರಣೆ ಬೇಡಿಕೆ ನಮ್ಮದಾಗಿದೆ’ ಎಂದರು.

ದಿನಕ್ಕೆ ₹150 ನಷ್ಟ: ‘ನಗರದ ಚಾಲಕರು, ದಿನಕ್ಕೆ ₹150ರಿಂದ ₹200 ನಷ್ಟ ಅನುಭವಿಸುತ್ತಿದ್ದಾರೆ. ಆ ನಷ್ಟವನ್ನು ತಪ್ಪಿಸಿ, ಚಾಲಕರು ಸ್ವಾವಲಂಬಿ ಜೀವನ ನಡೆಸಲು ದರ ಪರಿಷ್ಕರಣೆ ಮಾಡಬೇಕಾದ ಅಗತ್ಯವಿದೆ’ ಎಂದುಬೆಂಗಳೂರು ಆಟೊ ಚಾಲಕರ ಸೌಹಾರ್ದ ಕೋ–ಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಸೋಮಶೇಖರ್ ಹೇಳಿದರು.

‘ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ಸಾರಿಗೆ ಇಲಾಖೆ ಶುಲ್ಕ, ವಿದ್ಯುತ್ ಬಿಲ್, ದಿನಬಳಕೆ ವಸ್ತುಗಳು, ಆಟೊಗಳ ಬಿಡಿ ಭಾಗಗಳು... ಹೀಗೆ ಎಲ್ಲದರಲ್ಲೂ ದರ ಹೆಚ್ಚಳವಾಗಿದೆ. ಆಟೊ ಪ್ರಯಾಣ ದರವೇಕೆ ಪರಿಷ್ಕರಣೆ ಆಗಿಲ್ಲ’ ಎಂದು ಅವರು ಪ್ರಶ್ನಿಸಿದರು.

ಚಾಲ್ತಿಯಲ್ಲಿರುವ ದರ:

ಕನಿಷ್ಠ ದರ ಮೊದಲ 1.9 ಕಿ.ಮೀಗೆ – ₹25 (ಮೂರು ಜನ ಪ್ರಯಾಣಿಕರಿಗೆ)

ನಂತರದ ಪ್ರತಿ ಕಿ.ಮೀಗೆ – ₹13

ಕಾಯುವಿಕೆ ದರ

ಮೊದಲ ಐದು ನಿಮಿಷ – ಉಚಿತ

ಐದು ನಿಮಿಷ ನಂತರದ ಪ್ರತಿ ಹದಿನೈದು ನಿಮಿಷಕ್ಕೆ – ₹5

ರಾತ್ರಿ ವೇಳೆ ದರ – ಸಾಮಾನ್ಯ ದರ + ಸಾಮಾನ್ಯ ದರದ ಅರ್ಧ

(ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ)

ಆಟೊ ಚಾಲಕರು ಒತ್ತಾಯಿಸುತ್ತಿರುವ ಹೊಸ ದರ:

ಕನಿಷ್ಠ ದರ ಮೊದಲ 1.9 ಕಿ.ಮೀಗೆ – ₹30 (ಮೂರು ಜನ ಪ್ರಯಾಣಿಕರಿಗೆ)

ನಂತರದ ಪ್ರತಿ ಕಿ.ಮೀಗೆ – ₹15.30

ಕಾಯುವಿಕೆ ದರ:

ಮೊದಲ ಐದು ನಿಮಿಷ – ಉಚಿತ

ಐದು ನಿಮಿಷ ನಂತರದ ಪ್ರತಿ ಹದಿನೈದು ನಿಮಿಷಕ್ಕೆ – ₹10

ರಾತ್ರಿ ವೇಳೆ ದರ:

ಸಾಮಾನ್ಯ ದರ + ಸಾಮಾನ್ಯ ದರದ ಅರ್ಧ

(ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ)


ದರ ಪರಿಷ್ಕರಣೆ ಏಕೆ ಮಾಡಬೇಕು? ಚಾಲಕರು ಕೊಟ್ಟ ಕಾರಣ:

* ಹೊಸ ಆಟೊ ಬೆಲೆ ₹40 ಸಾವಿರ ಹೆಚ್ಚಳವಾಗಿದೆ

* ವಿಮೆ ಕಂತಿನ ದರ ₹4 ಸಾವಿರದಿಂದ ₹5 ಸಾವಿರ ಆಗಿದೆ

* ಆಟೊ ನೋಂದಣಿ ಶುಲ್ಕ ₹300ರಿಂದ ₹1,000 ಆಗಿದೆ

* ಅರ್ಹತಾಪತ್ರ ನವೀಕರಣ ದರ ₹200ರಿಂದ ₹600 ಆಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.