ADVERTISEMENT

ಅಸಭ್ಯವಾಗಿ ಆಚರಿಸಿದರೆ ಸಹಿಸೋಲ್ಲ: ಬಜರಂಗ ದಳ

ಪೊಲೀಸರ ಸಹಕಾರದೊಂದಿಗೆ ಹೊಸ ವರ್ಷಾಚರಣೆಗೆ ತಡೆ; ಬಜರಂಗದಳ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 19:55 IST
Last Updated 27 ಡಿಸೆಂಬರ್ 2018, 19:55 IST

ಬೆಂಗಳೂರು: ‘ಹೊಸ ವರ್ಷಾಚರಣೆ ನೆಪದಲ್ಲಿ ಅಶ್ಲೀಲ ಹಾಗೂ ಅಸಭ್ಯವಾಗಿ ವರ್ತಿಸುವುದನ್ನು ನಾವು ಸಹಿಸುವುದಿಲ್ಲ. ಯಾರಾದರೂ ಆ ರೀತಿ ವರ್ತಿಸಿದ್ದು ಕಂಡು ಬಂದರೆ, ಪೊಲೀಸರ ಸಹಕಾರದೊಂದಿಗೆ ಅವರ ಹೊಸ ವರ್ಷಾಚರಣೆಯನ್ನು ತಡೆಯಲಿದ್ದೇವೆ’ ಎಂದು ‘ಬಜರಂಗದಳ’ ಸಂಘಟನೆಯ ರಾಷ್ಟ್ರೀಯ ಘಟಕದ ಸಹ ಸಂಯೋಜಕ ಸೂರ್ಯನಾರಾಯಣ ಹೇಳಿದರು.

‘ವಿಶ್ವ ಹಿಂದು ಪರಿಷತ್‌’ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತೀಯರಿಗೆ ಯುಗಾದಿ ಹಬ್ಬವೇ ಹೊಸ ವರ್ಷ. ಡಿಸೆಂಬರ್ 31ರ ರಾತ್ರಿಯ ಹೊಸ ವರ್ಷಾಚರಣೆ ಅರ್ಥಹೀನ. ಅದು ಹಿಂದೂ ಜೀವನ ಪದ್ಧತಿಗೆ ಮಾರಕ’ ಎಂದು ಹೇಳಿದರು.

‘ಮಾದಕ ವಸ್ತು, ಮದ್ಯದ ಮಾಫಿಯಾಗಳೇ ಇಂಥ ಹೊಸ ವರ್ಷಾಚರಣೆಯನ್ನು ಪ್ರಚೋದಿಸುತ್ತಿವೆ. ಅದರಿಂದ ದೇಶದ ಯುವಜನತೆಯ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಇಂಥ ಹೊಸ ವರ್ಷಾಚರಣೆಗೆ ಪೊಲೀಸರೇ ರಕ್ಷಣೆ ನೀಡುವುದು ಹಾಸ್ಯಾಸ್ಪದ’ ಎಂದು ಸೂರ್ಯನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕಾನೂನು ಕೈಗೆತ್ತಿಕೊಂಡರೆ ಕ್ರಮ

‘ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಹೊಸ ವರ್ಷಾಚರಣೆ ವೇಳೆ ಯಾವುದಾದರೂ ಅಹಿತಕರ ಘಟನೆ ಕಂಡುಬಂದರೆ, ಬಜರಂಗದಳ ಸಂಘಟನೆಯವರು ಪೊಲೀಸರಿಗೆ ಮಾಹಿತಿ ನೀಡಬೇಕು. ಅದನ್ನು ಬಿಟ್ಟು, ತಾವೇ ದಾಳಿ ನಡೆಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್‌ಕುಮಾರ್ ಎಚ್ಚರಿಸಿದರು.

ಮಹಿಳಾ ಬೌನ್ಸರ್‌ಗಳಿಗೆ ಬೇಡಿಕೆ

ಹೊಸ ವರ್ಷಾಚರಣೆ ವೇಳೆ ರೆಸ್ಟೋರೆಂಟ್, ಕ್ಲಬ್ ಹಾಗೂ ಪಬ್‌ಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರ ರಕ್ಷಣೆಗಾಗಿ ಮಹಿಳಾ ಬೌನ್ಸರ್‌ಗಳನ್ನೇ ನೇಮಕ ಮಾಡಿಕೊಳ್ಳಲು ಪೊಲೀಸರು ಸೂಚನೆ ನೀಡಿದ್ದಾರೆ.

ರೆಸ್ಟೋರೆಂಟ್, ಕ್ಲಬ್ ಹಾಗೂ ಪಬ್‌ ಮಾಲೀಕರು, ಮಹಿಳಾ ಬೌನ್ಸರ್‌ಗಳಿಗಾಗಿ ಹುಡುಕಾಟ ನಡೆಸಿದ್ದು ಅವರಿಗೆ ಬೇಡಿಕೆಯೂ ಹೆಚ್ಚಾಗಿದೆ.

‘ಹೊಸ ವರ್ಷಾಚರಣೆಗೆ ನಾಲ್ಕೇ ದಿನ ಬಾಕಿ ಇದೆ. ಮಹಿಳಾ ಬೌನ್ಸರ್‌ಗಳು ಸಿಗುವುದು ಕಡಿಮೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಅಂಥ ಬೌನ್ಸರ್‌ಗಳನ್ನು ಹುಡುಕಿ ಕರೆತರುತ್ತಿದ್ದೇವೆ’ ಎನ್ನುತ್ತಾರೆ ಪಬ್ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.