
ಬೆಂಗಳೂರು: ಪತಿ ಹಾಗೂ ಅವರ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ನವ ವಿವಾಹಿತೆ ಗಾನವಿ (24) ಅವರು ಮೃತಪಟ್ಟಿದ್ದಾರೆ.
ಬಿ.ಚನ್ನಸಂದ್ರ ನಿವಾಸಿ ಗಾನವಿ ಅವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎಂಬುದಾಗಿ ವೈದ್ಯರು ತಿಳಿಸಿದ್ದರು. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.
ಗಾನವಿ ಪೋಷಕರು ಹಾಗೂ ಕುಟುಂಬಸ್ಥರು ಮೃತದೇಹವನ್ನು ಪತಿ ಸೂರಜ್ ಅವರ ವಿದ್ಯಾರಣ್ಯಪುರದ ಮನೆಗೆ ಕೊಂಡೊಯ್ದು ಪ್ರತಿಭಟನೆ ನಡೆಸಿದರು. ತಕ್ಷಣವೇ ಅರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.
ಪತಿ ಸೂರಜ್, ಅವರ ಸಹೋದರ ಸಂಜಯ್ ಹಾಗೂ ತಾಯಿ ಜಯಂತಿ ವಿರುದ್ಧ ಗಾನವಿ ಪೋಷಕರು ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯ ಆರೋಪದಡಿ ದೂರು ನೀಡಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಸೂರಜ್ ಅವರು ಡಿಪ್ಲೊಮಾ ಪದವಿ ಪಡೆದಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅ.29ರಂದು ನಗರದ ಕಲ್ಯಾಣ ಮಂಟಪವೊಂದರಲ್ಲಿ ಗಾನವಿ ಅವರನ್ನು ಮದುವೆ ಆಗಿದ್ದರು.
‘₹40 ಲಕ್ಷ ಖರ್ಚು ಮಾಡಿ ಅರಮನೆ ಮೈದಾನದಲ್ಲಿ ಆರತಕ್ಷತೆ ಮಾಡಲಾಗಿತ್ತು. ಅಲ್ಲದೆ, ದಂಪತಿಯನ್ನು ಶ್ರೀಲಂಕಾಕ್ಕೆ ಹನಿಮೂನ್‌ಗೂ ಕಳುಹಿಸಲಾಗಿತ್ತು. ಆದರೆ, ದಂಪತಿ ಐದನೇ ದಿನಕ್ಕೆ ವಾಪಸ್ ಬಂದಿದ್ದರು. ಈ ಸಂಬಂಧ ಸೂರಜ್ ಹಾಗೂ ಅವರ ಕುಟುಂಬಸ್ಥರನ್ನು ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಬೆದರಿಸಿದ್ದರು. ಹೀಗಾಗಿ, ಗಾನವಿ ತನ್ನ ತವರು ಮನೆಗೆ ಬಂದಿದ್ದರು. ಬುಧವಾರ ಮಧ್ಯಾಹ್ನ ಕೊಠಡಿಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದನ್ನು ಗಮನಿಸಿದ ಕುಟುಂಬದ ಸದಸ್ಯರು ಕೂಡಲೇ ನೇಣು ಕುಣಿಕೆಯಿಂದ ಆಕೆಯನ್ನು ಇಳಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ವಿವಾಹದ ಆರಂಭಿಕ ದಿನಗಳಲ್ಲೇ ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು. ಹನಿಮೂನ್‌ಗೆ ತೆರಳಿದ್ದ ದಂಪತಿ ಇದೇ ಕಾರಣಕ್ಕೆ ಮಧ್ಯದಲ್ಲೇ ವಾಪಸ್ ಬಂದಿದ್ದರು ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.