
ಬೆಂಗಳೂರು: ನವ ವಿವಾಹಿತರಾದ ಬಿ.ಚನ್ನಸಂದ್ರ ನಿವಾಸಿ ಗಾನವಿ ಹಾಗೂ ವಿದ್ಯಾರಣ್ಯಪುರದ ನಿವಾಸಿ ಸೂರಜ್ ಆತ್ಮಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದಿದ್ದು, ಗಾನವಿ ಕುಟುಂಬದ 9 ಮಂದಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂರಜ್ ಅವರ ಅತ್ತಿಗೆ ಬಿ.ಎನ್.ಸಿಂಧು ಅವರು ನೀಡಿದ ದೂರಿನ ಮೇರೆಗೆ ಗಾನವಿ ಕುಟುಂಬದ ರಾಧಾ, ಬಾಬುಗೌಡ, ಕಾರ್ತಿಕ್, ಮಹಾದೇವ, ಗಗನ್, ಶಶಿಕುಮಾರ್, ರುಕ್ಮಿಣಿ, ಅಭಿಲಾಷ್, ಅಭಿಷೇಕ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿ ಸೂರಜ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಗಾನವಿ ಕುಟುಂಬಸ್ಥರೇ ಕಾರಣ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪತಿ ಸೂರಜ್ ಹಾಗೂ ಅವರ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ಗಾನವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸೂರಜ್ ಹಾಗೂ ಅವರ ತಾಯಿ ಜಯಂತಿ ಮಹಾರಾಷ್ಟ್ರಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಎರಡು ದಿನಗಳ ಬಳಿಕ ಸೂರಜ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವರ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಸೂರಜ್ ಹಾಗೂ ಗಾನವಿ ಅವರು ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀಲಂಕಾಗೆ ಹತ್ತು ದಿನಗಳ ಹನಿಮೂನ್‌ಗೆ ದಂಪತಿ ತೆರಳಿದ್ದರು. ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ, ದಂಪತಿ ಮನೆಗೆ ವಾಪಸ್ ಬಂದಿದ್ದರು. ನಂತರ, ಮನೆಯಲ್ಲೂ ಜಗಳ ನಡೆದಿತ್ತು. ಗಾನವಿ ಅವರನ್ನು ಪೋಷಕರು ಮನೆಗೆ ಕರೆದೊಯ್ದಿದ್ದರು. ತವರು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಮೃತಪಟ್ಟಿದ್ದರು. ಮೃತದೇಹವನ್ನು ಸೂರಜ್ ನಿವಾಸಕ್ಕೆ ತಂದು ಪೋಷಕರು ಹಾಗೂ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.
‘ಬೇರೆ ಹುಡುಗನ್ನು ಪ್ರೀತಿಸುತ್ತಿದ್ದೇನೆ. ಆತನನ್ನು ಮದುವೆ ಆಗಬೇಕೆಂದು ನಿರ್ಧರಿಸಿದ್ದೇನೆ ಎಂದು ಶ್ರೀಲಂಕಾಕ್ಕೆ ತೆರಳಿದ್ದ ವೇಳೆ ಗಾನವಿ ಅವರು ಸೂರಜ್‌ಗೆ ಹೇಳಿದ್ದರು. ಆ ಮಾತಿನಿಂದ ಆಘಾತಗೊಂಡು ಸೂರಜ್ ಅವರು ಶ್ರೀಲಂಕಾ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ಬಂದಿದ್ದರು. ಈ ವಿಷಯವನ್ನು ಮುಚ್ಚಿಟ್ಟು ಮದುವೆ ಮಾಡಲಾಗಿತ್ತು. ಅಲ್ಲದೇ ಗಾನವಿ ಆಸ್ಪತ್ರೆಗೆ ದಾಖಲಾದ ಮೇಲೆ ಅಭಿಷೇಕ್, ಅಭಿಲಾಷ್ ಮತ್ತಿತರರು ಬೆದರಿಕೆ ಹಾಕಿದ್ದರು’ ಎಂಬ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ರಾಮಮೂರ್ತಿನಗರ ಹಾಗೂ ವಿದ್ಯಾರಣ್ಯಪುರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.