ADVERTISEMENT

ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್‌ಜಿಟಿ ತರಾಟೆ

ಬೆಳ್ಳಂದೂರು ಕೆರೆ ಮೀಸಲು ಪ್ರದೇಶ ಒತ್ತುವರಿ l ಪಾಲನೆಯಾಗದ ಆದೇಶ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 22:15 IST
Last Updated 23 ಫೆಬ್ರುವರಿ 2023, 22:15 IST
   

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಮತ್ತು ಅಗರ ಕೆರೆಗಳ ಮೀಸಲು ಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) 2016ರ ಆದೇಶವನ್ನು ಜಾರಿಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರ ನಿರಾಸಕ್ತಿ ತಾಳಿವೆ ಎಂದು ಎನ್‌ಜಿಟಿಯ ಪ್ರಧಾನ ‍ಪೀಠ ತರಾಟೆಗೆ ತೆಗೆದುಕೊಂಡಿದೆ.

2016ರ ಆದೇಶದ ಅನುಷ್ಠಾನ ಆಗಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಫಾರ್ವರ್ಡ್‌ ಫೌಂಡೇಷನ್‌, ಸಿಟಿಜನ್‌ ಆ್ಯಕ್ಷನ್‌ ಫೋರಂ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧೀರ್ ಅಗರವಾಲ್‌, ಎ.ಸೆಂಥಿಲ್‌ ವೇಲ್‌ ಹಾಗೂ ಅಫ್ರೋಜ್‌ ಅಹ್ಮದ್‌ ಅವರನ್ನು ಒಳಗೊಂಡ ಪೀಠ, ಬಿಡಿಎ, ಕೆಎಸ್‌ಪಿಸಿಬಿ ಹಾಗೂ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ಕೆರೆಯಂಗಳದ ಅಕ್ರಮ ಕಟ್ಟಡಗಳ ತೆರವಿಗೆ ಈ ಹಿಂದೆ ಆದೇಶ ನೀಡಲಾಗಿತ್ತು. ಆ ಆದೇಶ ಇಲ್ಲಿಯವರೆಗೆ ಪಾಲನೆ ಆಗಿಲ್ಲ ಎಂದು ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಕಟ್ಟಡ ನಿರ್ಮಾಣದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಎರಡು ಕಂಪನಿಗಳಿಗೆ ದಂಡ ವಿಧಿಸಲಾಗಿತ್ತು. ಈ ದಂಡ ಇನ್ನೂ ಪಾವತಿ ಆಗಿಲ್ಲ ಎಂದೂ ಪೀಠ ಅತೃಪ್ತಿ ‌ವ್ಯಕ್ತಪಡಿಸಿತು. ಬಳಿಕ ವಿಚಾರಣೆಯನ್ನು ಏಪ್ರಿಲ್‌ 3ಕ್ಕೆ
ಮುಂದೂಡಿತು.

ADVERTISEMENT

ಬೆಳ್ಳಂದೂರು ಮತ್ತು ಅಗರ ಕೆರೆಗಳ ಸಂರಕ್ಷಿತ ವಲಯದಲ್ಲಿ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್, ಹೋಟೆಲ್, ಬಹುಮಹಡಿ ಕಾರು ನಿಲುಗಡೆ ಸಂಕೀರ್ಣ, ವಾಣಿಜ್ಯ ಮತ್ತು ವಸತಿ ಸಮುಚ್ಛಯ ನಿರ್ಮಿಸಿದಲ್ಲಿ ಪರಿಸರದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ಎನ್‌ಜಿಟಿ 2016ರ ಮೇ 4ರ ಆದೇಶದಲ್ಲಿ ತಿಳಿಸಿತ್ತು. ಕೆರೆಗಳ ಮೀಸಲು ಪ್ರದೇಶವನ್ನು 75 ಮೀಟರ್‌ಗೆ, ಪ್ರಾಥಮಿಕ ರಾಜಕಾಲುವೆಗಳ ಮೀಸಲು ಪ್ರದೇಶವನ್ನು 50 ಮೀಟರ್‌, ಎರಡನೇ ಹಂತದ ರಾಜಕಾಲುವೆಗಳ ಮೀಸಲು ಪ್ರದೇಶವನ್ನು 35 ಮೀಟರ್‌ ಹಾಗೂ ಮೂರನೇ ಹಂತದ ರಾಜಕಾಲುವೆಗಳ ಮೀಸಲು ಪ್ರದೇಶವನ್ನು 25 ಮೀಟರ್‌ಗೆ ಏರಿಸಿತ್ತು. ಜತೆಗೆ, ಕೆರೆ ಒತ್ತುವರಿ ಮಾಡಿದ್ದಕ್ಕೆ ಮಂತ್ರಿ ಟೆಕ್‌ಜೋನ್‌ ಕಂಪನಿಗೆ ₹117 ಕೋಟಿ ದಂಡ, ಕೋರ್‌ ಮೈಂಡ್‌ ಸಾಫ್ಟ್‌ವೇರ್‌ ಮತ್ತು ಸರ್ವೀಸಸ್‌ ಪ್ರೈ.ಲಿ.ಗೆ ₹13.5 ಕೋಟಿ ದಂಡ ವಿಧಿಸಿತ್ತು.

ಎನ್‌ಜಿಟಿ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಹಾಗೂ ರಿಯಲ್‌ ಎಸ್ಟೇಟ್‌ ಕಂಪನಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು. ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಮೀಸಲು ಪ್ರದೇಶದ ಮಿತಿ ಹೆಚ್ಚಿಸಿ ಎನ್‌ಜಿಟಿ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ 2019ರ ಮಾರ್ಚ್‌ 5ರಂದು‌ ರದ್ದುಗೊಳಿಸಿತ್ತು. ಜತೆಗೆ, ಕೆರೆ ಒತ್ತುವರಿ ವಿಚಾರವಾಗಿ ಮಂತ್ರಿ ಟೆಕ್‌ಜೋನ್‌ ಪ್ರೈ.ಲಿ. ಹಾಗೂ ಕೋರ್‌ ಮೈಂಡ್‌ ಸಾಫ್ಟ್‌ವೇರ್‌ ಮತ್ತು ಸರ್ವೀಸಸ್‌ ಪ್ರೈ.ಲಿ.ನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.

ಬೆಳ್ಳಂದೂರು ಮತ್ತು ಅಗರ ಕೆರೆಗಳ ಸಂರಕ್ಷಿತ ವಲಯದಲ್ಲಿ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್, ಹೋಟೆಲ್, ಕಾರ್‌ ಪಾರ್ಕಿಂಗ್‌ ಸಂಕಿರಣ, ವಾಣಿಜ್ಯ ಸಂಬಂಧಿ ಮತ್ತು ವಸತಿ ಸಮುಚ್ಛಯ ನಿರ್ಮಿಸಿದಲ್ಲಿ ಪರಿಸರದ ಮೇಲೆ ಭಾರಿ ಹೊಡೆತ ಉಂಟಾಗಲಿದೆ ಎಂಬ ಎನ್‌ಜಿಟಿಯ ಅಭಿಪ್ರಾಯಕ್ಕೆ ನ್ಯಾಯಪೀಠವೂ ತನ್ನ ಸಮ್ಮತಿ ಸೂಚಿಸಿತ್ತು.

₹117 ಕೋಟಿ ದಂಡದ ಆದೇಶವನ್ನು ಎತ್ತಿಹಿಡಿದಿದ್ದ 2019ರ ತೀರ್ಪಿನ ವಿರುದ್ಧ ಮಂತ್ರಿ ಟೆಕ್‌ಜೋನ್‌ ಸಂಸ್ಥೆ ಕ್ಯುರೇಟಿವ್‌ ಅರ್ಜಿಯನ್ನು ಸಲ್ಲಿಸಿತ್ತು. ಅದನ್ನು ಸುಪ್ರೀಂ ಕೋರ್ಟ್‌ 2020ರಲ್ಲಿ ವಜಾಗೊಳಿಸಿತ್ತು.

ಈ ನಡುವೆ, ಬೆಂಗಳೂರಿನ ಬೆಳ್ಳಂದೂರು ಮತ್ತು ಅಗರ ಕೆರೆಗಳ ಬಫರ್ ವಲಯದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಮಾಡಲು ಹೊಸದಾಗಿ ಪರಿಸರ ಇಲಾಖೆಯಿಂದ ಅನುಮತಿ ಪಡೆಯುವಂತೆ ಮಂತ್ರಿ ಟೆಕ್ ಜೋನ್ ಸಂಸ್ಥೆಗೆ ಎನ್‌ಜಿಟಿ ಸೂಚಿಸಿತ್ತು.

ಅರ್ಜಿದಾರರ ಆರೋಪವೇನು?

‘ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌), ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹಾಗೂ ಮಾಲ್‌ ಸೇರಿದಂತೆ 80 ಎಕರೆ ಜಾಗದಲ್ಲಿ ಕಂಪನಿಗಳು ಕಟ್ಟಡ ನಿರ್ಮಾಣ ಮಾಡುತ್ತಿವೆ. ಈ ಜಾಗವು ಬೆಳ್ಳಂದೂರು ಹಾಗೂ ಅಗರ ಕೆರೆಯ ಮಧ್ಯ ಇದೆ. ಅಲ್ಲದೆ, ಈ ಪ್ರದೇಶದ ರಾಜಕಾಲುವೆಯ 2.61 ಎಕರೆಯನ್ನು ಒತ್ತುವರಿ ಮಾಡಿಕೊಂಡಿವೆ’ ಎಂದು ಅರ್ಜಿದಾರರು ಎನ್‌ಜಿಟಿಗೆ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.