
ಬೆಂಗಳೂರು: ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ–ಎಂಆರ್‌ಐ ಸ್ಕ್ಯಾನ್ ಸೇವೆ ಸ್ಥಗಿತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಸ್ಪಷ್ಟನೆ ನೀಡಿದ್ದು, ‘ಎರಡು ಮೂರು ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸಿಟಿ–ಎಂಆರ್‌ಐ ಸ್ಕ್ಯಾನ್ ಘಟಕಗಳು ಸಂಪೂರ್ಣ ಕಾರ್ಯನಿರ್ವಹಿಸಲಿವೆ’ ಎಂದು ತಿಳಿಸಿದೆ.
ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) 13 ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಸೇವೆಗಳನ್ನು, 5 ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನ್ ಸೇವೆಗಳನ್ನು ಒದಗಿಸಲು ಎಂ/ಎಸ್ ಕೃಷ್ಣ ಡಯಾಗ್ನಾಸ್ಟಿಕ್ಸ್ ಲಿಮಿಟೆಡ್ 2017ರಲ್ಲಿ ರಾಜ್ಯ ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಈ ಸಂಸ್ಥೆಯು ಸೇವೆಗಳನ್ನು ಹಠಾತ್ತನೆ ನಿಲ್ಲಿಸಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಮತ್ತು ಎಂಆರ್‌ಐ ಸೇವೆಗಳು ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ಅಡಿ ಪಟ್ಟಿ ಮಾಡಲಾದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಎನ್‌ಎಚ್‌ಎಂ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸ್ಪಷ್ಟಪಡಿಸಿದ್ದಾರೆ.
‘ಜಿಲ್ಲಾ ಆಸ್ಪತ್ರೆಗಳಿಗೆ ಹತ್ತಿರದಲ್ಲಿರುವ ಆಸ್ಪತ್ರೆಗಳಲ್ಲಿ ಸಿಟಿ–ಎಂಆರ್‌ಐ ಸ್ಕ್ಯಾನ್ ಸೇವೆ ಒದಗಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್ ಇರುವ ರೋಗಿಗಳಿಗೆ ಉಚಿತವಾಗಿ ಮತ್ತು ಎಪಿಎಲ್ ಕಾರ್ಡ್ ಇರುವ ರೋಗಿಗಳಿಗೆ ಶೇ 30ರಷ್ಟು ರಿಯಾಯಿತಿಯಲ್ಲಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. 2019ರಿಂದ ₹143 ಕೋಟಿ ಬಾಕಿ ಹಣವನ್ನು ಪಾವತಿಸದಿರುವ ಬಗ್ಗೆ ಸಂಸ್ಥೆ ದೂರಿದೆ. ಇಷ್ಟು ಮೊತ್ತ ನೀಡಬೇಕು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪಾವತಿಸಿಲ್ಲ’ ಎಂದು ತಿಳಿಸಿದ್ದಾರೆ.
‘ರಾಜ್ಯದಾದ್ಯಂತ ಸಿಟಿ–ಎಂಆರ್‌ಐ ಸೇವೆಗಳನ್ನು ಒದಗಿಸಲು ರಾಜ್ಯ ಸರ್ಕಾರ ಅಗತ್ಯ ಹಣವನ್ನು ಹೊಂದಿದೆ. ಈಗಾಗಲೇ ಕೆಲವು ಸ್ಥಳಗಳಲ್ಲಿ ಪರ್ಯಾಯ ಸಂಸ್ಥೆಗಳಲ್ಲಿ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳು ಪುನರಾರಂಭಗೊಂಡಿವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.