ಬೆಂಗಳೂರು: ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರು (ಎನ್‌ಎಚ್‌ಎಂ) ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘವು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆದಿದೆ.
‘ಎನ್‌ಎಚ್‌ಎಂ ಅಡಿ ಸುಮಾರು 30 ಸಾವಿರ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ವಿಶೇಷ ಸೌಲಭ್ಯವಿಲ್ಲದೆ 15–20 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಆದ್ದರಿಂದ ಕೂಡಲೇ ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ ಅಧ್ಯಕ್ಷತೆಯ ಮಾನವ ಸಂಪನ್ಮೂಲ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಿ, ಕಾಯಂಗೊಳಿಸಬೇಕು. ಇಲಾಖೆಯಲ್ಲಿ ಶೇ 70ರಷ್ಟು ಹುದ್ದೆಗಳು ಖಾಲಿ ಇದ್ದರೂ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆಯಲು ಮುಖ್ಯ ಕಾರಣ ಗುತ್ತಿಗೆ ನೌಕರರು’ ಎಂದು ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಯಮೋಜಿ ತಿಳಿಸಿದ್ದಾರೆ.
‘ಪ್ರಸ್ತುತ ನೀಡುತ್ತಿರುವ ವೇತನವು ಅತ್ಯಂತ ಕಡಿಮೆ ಇದ್ದು, ಕನಿಷ್ಠ ಜೀವನ ಸಾಗಿಸುವುದೂ ಕಷ್ಟವಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಒದಗಿಸಲು ಕ್ರಮವಹಿಸಬೇಕು. ವೈದ್ಯಕೀಯ ಚಿಕಿತ್ಸಾ ಮರುಪಾವತಿ ಹಾಗೂ ವಿಮೆ ಯೋಜನೆ, ಮೃತ ನೌಕರರ ಕುಟುಂಬಕ್ಕೆ ಆರ್ಥಿಕ ಪರಿಹಾರ ಮತ್ತು ಉದ್ಯೋಗ ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಹೊರಗುತ್ತಿಗೆ ನೌಕರರನ್ನು ನೇರಗುತ್ತಿಗೆ ನೌಕರರನ್ನಾಗಿ ಮಾಡಬೇಕು. ಅವರಿಗೂ ವೇತನವನ್ನು ಪರಿಷ್ಕರಣೆ ಮಾಡಬೇಕು. ಹರಿಯಾಣ ಮಾದರಿ ಮಾನವ ಸಂಪನ್ಮೂಲ ನೀತಿಯನ್ನು ರಚಿಸಬೇಕು. ಛತ್ತೀಸ್‌ಗಢ ಸರ್ಕಾರದಂತೆ ಏ.1ರಂದು ವಿರಾಮ ದಿನವನ್ನು ರದ್ದುಗೊಳಿಸಬೇಕು. ಕನಿಷ್ಠ ವೇತನ ಕಾಯ್ದೆಯಂತೆ ವೇತನ ಹೆಚ್ಚಿಸಿ, ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.