ಬೆಂಗಳೂರು: ಸರ್ಕಾರದ ಅಂಗ ಸಂಸ್ಥೆಯಾಗಿರುವ ‘ನ್ಯಾಷನಲ್ ಇನ್ಫರ್ಮೆಟಿಕ್ ಸೆಂಟರ್ (ಎನ್‍ಐಸಿ)’ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ಅನ್ನು ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪರೀಕ್ಷಾ ವ್ಯವಸ್ಥೆಗೆ ಬಳಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.
‘ಪರೀಕ್ಷಾ ವ್ಯವಸ್ಥೆಯ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿ ಮೈಸೂರು ವಿಶ್ವವಿದ್ಯಾಲಯ 2019ರ ಆಗಸ್ಟ್ 31ರಂದು ಕರೆದಿರುವ ಟೆಂಡರ್ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಈಗ ಬಳಸುತ್ತಿರುವ ಸಾಫ್ಟ್‌ವೇರ್‌ಗಿಂತ ಎನ್‌ಐಸಿ ಸಾಫ್ಟ್‌ವೇರ್ ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಅಧ್ಯಯನ ವರದಿ ಅರ್ಜಿದಾರರ ಬಳಿ ಇಲ್ಲ. ಈ ವಿಚಾರದಲ್ಲಿ ಪ್ರಾವೀಣ್ಯತೆ ಕೋರ್ಟ್‌ಗೆ ಇಲ್ಲ, ಅರ್ಜಿದಾರರಿಗೂ ಇಲ್ಲ. ಹೀಗಾಗಿ ಇಂತಹದೇ ಸಾಫ್ಟ್‌ವೇರ್‌ಬಳಸಿ ಎಂದು ಕೋರ್ಟ್ ಹೇಳಲು ಆಗುವುದಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.
‘ಅರ್ಜಿ ಮಾನ್ಯ ಮಾಡಿದರೆ ಅದರ ಪರಿಣಾಮ ಎಲ್ಲಾ ಪರೀಕ್ಷೆಗಳ ಮೇಲೆ ಬೀರಲಿದೆ. ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಪೀಠ ಹೇಳಿತು.
‘ಭದ್ರತೆ ವಿಷಯವನ್ನು ತಜ್ಞರು ನಿರ್ಧರಿಸಬೇಕಾಗುತ್ತದೆ’ ಎಂದು ಹೇಳಿದ ಪೀಠ, ಅರ್ಜಿ ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.