ADVERTISEMENT

ಹುಚ್ಚರೆಂದುಕೊಂಡವರಿಗೆ ಅಚ್ಚರಿ ನೀಡಿದ ನಿಮ್ಹಾನ್ಸ್

‘ವಾಕಿಂಗ್‌ ಟೂರ್‌ ಇನ್‌ ನಿಮ್ಹಾನ್ಸ್’ ಅಭಿಯಾನ l ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 19:56 IST
Last Updated 28 ಸೆಪ್ಟೆಂಬರ್ 2019, 19:56 IST
ಅಭಿಯಾನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು - –ಪ್ರಜಾವಾಣಿ ಚಿತ್ರ
ಅಭಿಯಾನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಾನಸಿಕ ರೋಗಿಗಳ ಚೀರಾಟ, ಶಾಕ್‌ ಟ್ರಿಟ್ಮೆಂಟ್‌, ಕಪ್ಪು ಕೋಣೆಗಳು, ಸರ‍ಪಳಿ ಬಂಧನ...

ಮನೋರೋಗಿಗಳ ಆಸ್ಪತ್ರೆ ಎಂದರೆ ಹೀಗೆಲ್ಲ ಇರಬಹುದು ಎಂಬ ಕಲ್ಪನೆಯೊಂದಿಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್‌) ಶನಿವಾರ ಭೇಟಿ ನೀಡಿದ ನಗರದ ಜನತೆ ಇಲ್ಲಿನ ಪ್ರಶಾಂತ ವಾತಾವರಣ ಕಂಡು ಮೂಕವಿಸ್ಮಿತರಾದರು.

ಸಂಸ್ಥೆಯು ‘ವಾಕಿಂಗ್‌ ಟೂರ್‌ ಇನ್‌ ನಿಮ್ಹಾನ್ಸ್’ ಅಭಿಯಾನದ ಪ್ರಯುಕ್ತ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಿತ್ತು. ನೂರಾರು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ನಿಮ್ಹಾನ್ಸ್ ಪ್ರಾಂಗಣದ ಕುರಿತು ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್. ಗಂಗಾಧರ ನೇತೃತ್ವದಲ್ಲಿ ವೈದ್ಯರ ತಂಡವು ಸಾರ್ವಜನಿಕರಿಗೆ ವಿವರಿಸಿತು. ವಿವಿಧ ವಯೋಮಾನದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮನೋರೊಗ ಚಿಕಿತ್ಸಾ ವಿಧಾನಗಳ ಬಗ್ಗೆ, ಈ ಸಂಸ್ಥೆಯ ವಿಶಿಷ್ಟತೆ ಬಗ್ಗೆ ತಿಳಿದುಕೊಂಡರು.

ADVERTISEMENT

ಇಲ್ಲಿನ ಪ್ರಶಾಂತ ವಾತಾವರಣ, ನೂರಾರು ವರ್ಷ ಹಳೆಯ ಮರ, ಚಂದದ ಉದ್ಯಾನ, ಜನರಿಂದ ತುಂಬಿದ್ದರೂ ಎಲ್ಲೆಡೆ ಸ್ವಚ್ಛತೆ ಇವೆಲ್ಲವೂ ಸಾರ್ವಜನಿಕರಿಗೆ ಅಚ್ಚರಿಯನ್ನು ಉಂಟುಮಾಡಿದವು. ಕ್ಯಾಂಪಸ್‌ನಲ್ಲಿ ಹೆಜ್ಜೆ ಹಾಕುತ್ತಾ, ಅದರ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ಜನರಲ್ಲಿದ್ದ ತಪ್ಪು ಅಭಿಪ್ರಾಯಗಳು ಒಂದೊಂದಾಗಿ ಕಳಚಿಕೊಂಡವು. ಮಾನಸಿಕ ರೋಗಿಗಳನ್ನು ನೋಡಿ ‘ಅವರೂ ನಮ್ಮಂತೆ’ ಎಂಬುದನ್ನು ಅವರ ಪ್ರತಿಯೊಂದು ಹೆಜ್ಜೆಗಳು ಇನ್ನಷ್ಟು ದೃಢಪಡಿಸಿದವು.

ಸಂಸ್ಥೆಯ ಸೌಂದರ್ಯ ಹೆಚ್ಚಿಸಿರುವ ಬ್ರಿಟೀಷರ ಕಾಲದ ನೊರೋನ್ಹಾ ಉದ್ಯಾನ, ವಿವಿಧ ಪ್ರಭೇದಗಳ ಸಾಕುಪ್ರಾಣಿಗಳು ಹಾಗೂ ಪಕ್ಷಿಗಳನ್ನು ನೋಡಿ ಜನ ಪುಳಕಿತರಾದರು.

‘ಸಿನಿಮಾಗಳಲ್ಲಿ ತೋರಿಸುವಂತೆ ರೋಗಿಗಳನ್ನು ಕತ್ತಲು ಕೋಣೆಯಲ್ಲಿ ಕೂಡಿ ಹಾಕುತ್ತಾರೆ ಅಂದುಕೊಂಡಿದ್ದೆ. ಆದರೆ, ಇಲ್ಲಿ ಬಂದ ಮೇಲೆ ಅದು ಸುಳ್ಳು ಎನ್ನುವುದು ಮನದಟ್ಟಾಯಿತು. ಮಾನಸಿಕ ರೋಗಿಗಳ ಕುರಿತು ನನ್ನಲ್ಲಿದ್ದ ಅಭಿಪ್ರಾಯವೂ ಬದಲಾಗಿದೆ’ ಎಂದು ಜೆ.ಪಿ. ನಗರದ ನಿವಾಸಿ ರಾಮಚಂದ್ರ ತಿಳಿಸಿದರು.

‘ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಕೆಲ ರೋಗಿಗಳಿಗೆ ಕುಟುಂಬದ ಸದಸ್ಯರು ಇಲ್ಲ. ಚೇತರಿಸಿಕೊಳ್ಳದ ರೋಗಿಗಳು ಹೊರಗಡೆ ಹೋಗದಂತೆ ಭದ್ರತೆ ಒದಗಿಸಲಾಗಿದೆ. ಮಾನವೀಯ ದೃಷ್ಟಿಯಿಂದ ಅಂತಹ ರೋಗಿಗಳನ್ನು ಕಾಣಬೇಕು’ ಎಂದು ಸಂಸ್ಥೆಯ ನಿರ್ದೇಶ ಡಾ.ಬಿ.ಎನ್. ಗಂಗಾಧರ ತಿಳಿಸಿದರು.

ಸಂಸ್ಥೆಯ ಪ್ರಾಧ್ಯಾಪಕ ಡಾ. ಸಂತೋಷ್‌ ಲೋಗನಾಥ್‌, ‘ನಾನು ಮನೋವಿಜ್ಞಾನ ಅಧ್ಯಯನ ಮಾಡುವಾಗ ಹೆಚ್ಚಾಗಿ ಜನರ ಬಳಿ ಮಾತನಾಡುತ್ತಿರಲಿಲ್ಲ. ಇದರಿಂದ ಕೆಲವರು ಮಾನಸಿಕ ವೈದ್ಯ ಎಂದು ಕರೆಯುತ್ತಿದ್ದರು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಆಸಕ್ತರು, ಮಾನಸಿಕ ರೋಗಿಗಳ ಬ್ಲಾಕ್‌, ಡಾ.ಎಂ.ವಿ. ಗೋವಿಂದರಾಜ್‌ ಬ್ಲಾಕ್‌, ಐತಿಹಾಸಿಕ ಗ್ರಂಥಾಲಯ, ಯೋಗ ಕೇಂದ್ರ, ರೋಗಿಗಳ ವಾರ್ಡ್‌, ಚಟ ಬಿಡಿಸುವ ಬ್ಲಾಕ್‌, ಹೊರರೋಗಿಗಳ ವಿಭಾಗ, ಕೌಟುಂಬಿಕ ವಾರ್ಡ್‌, ಮಕ್ಕಳ ವಿಭಾಗ, ಪುನರ್ವಸತಿ ಕೇಂದ್ರ, ಕಲಾ ಕೇಂದ್ರ, ಅಶ್ವಿನಿ ಬ್ಲಾಕ್‌ಗಳ ಇತಿಹಾಸ ಹಾಗೂ ಮಾಹಿತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.