ADVERTISEMENT

ಮಿದುಳು ಟ್ಯೂಮರ್ ಬಯಾಪ್ಸಿ ಮಾದರಿ ಕದ್ದು ಮಾರಾಟ

ನಿಮ್ಹಾನ್ಸ್ ವೈದ್ಯರು ಸಂಗ್ರಹಿಸಿಟ್ಟಿದ್ದ ಮಾದರಿ * ಟೆಕ್ನಿಷಿಯನ್, ಶವಾಗಾರದ ಸಹಾಯಕ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 4:36 IST
Last Updated 29 ಡಿಸೆಂಬರ್ 2023, 4:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ರೋಗಿಗಳ ಮಿದುಳು ಟ್ಯೂಮರ್ ಬಯಾಪ್ಸಿ ಮಾದರಿಗಳನ್ನು ಕದ್ದು ಕೇರಳಕ್ಕೆ ಅಕ್ರಮವಾಗಿ ಮಾರಾಟ ಮಾಡಲಾಗಿದ್ದು, ಹಣದ ಆಸೆಗಾಗಿ ಆಸ್ಪತ್ರೆ ಸಿಬ್ಬಂದಿಯೇ ಈ ಕೃತ್ಯ ಎಸಗಿರುವುದು ಆಂತರಿಕ ತನಿಖೆಯಿಂದ ಗೊತ್ತಾಗಿದೆ.

ಬಯಾಪ್ಸಿ ಮಾದರಿ ಅಕ್ರಮ ಮಾರಾಟವನ್ನು ಪತ್ತೆ ಮಾಡಿರುವ ನಿಮ್ಹಾನ್ಸ್ ವೈದ್ಯರು ಹಾಗೂ ರೆಜಿಸ್ಟ್ರಾರ್ ಡಾ. ಶಂಕರ್‌ನಾರಾಯಣ್ ರಾವ್ ಅವರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ನಿಮ್ಹಾನ್ಸ್‌ನ ಟೆಕ್ನಿಷಿಯನ್ ಎಂ.ಆರ್. ಚಂದ್ರಶೇಖರ್, ಶವಾಗಾರದ ಸಹಾಯಕ ಎಸ್. ಅಣ್ಣಾ ದೊರೈ, ಕೇರಳದ ರಘುರಾಮ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ADVERTISEMENT

‘ಆರೋಪಿ ಚಂದ್ರಶೇಖರ್, ಬಿವಿಜಿ ಏಜೆನ್ಸಿ ಮೂಲಕ ನಿಮ್ಹಾನ್ಸ್‌ನ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತ ಅಣ್ಣಾ ದೊರೈ ಜೊತೆ ಸೇರಿಕೊಂಡು ಬಯಾಪ್ಸಿ ಮಾದರಿಗಳನ್ನು ಕದ್ದು ಮಾರಾಟ ಮಾಡಿರುವ ಆರೋಪವಿದೆ. ಪ್ರಕರಣದ ಬಗ್ಗೆ ಆರೋಪಿಗಳ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮಿದುಳು ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಇಂಥ ರೋಗಿಗಳ ಮಿದುಳು ಟ್ಯೂಮರ್ (ಗಡ್ಡೆ) ಬಯಾಪ್ಸಿ ಮಾದರಿಗಳನ್ನು ಸಂಗ್ರಹಿಸುವ ವೈದ್ಯರು, ಶವಾಗಾರದಲ್ಲಿ ಇರಿಸುತ್ತಿದ್ದಾರೆ. ಇಂಥ ಬಯಾಪ್ಸಿ ಮಾದರಿಗಳನ್ನು ಮಾರಾಟ ಮಾಡುವ ಜಾಲ ಇದೀಗ ಪತ್ತೆಯಾಗಿದ್ದು, ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಯಾ‍ಪ್ಸಿ ಮಾದರಿ ಮಾರಾಟದ ಬಗ್ಗೆ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಾಗಿದೆ. ಇದರ ಹಿಂದೆ ರಾಷ್ಟ್ರ ಮಟ್ಟದ ಜಾಲವಿರುವ ಅನುಮಾನವಿದೆ. ಹೀಗಾಗಿ, ಬಯಾಪ್ಸಿ ಮಾದರಿಗಳ ಬಗ್ಗೆ ನಿಖರ ಪುರಾವೆಗಳನ್ನು ನೀಡುವಂತೆ ಆಸ್ಪತ್ರೆಯವರನ್ನು ಕೋರಲಾಗಿದೆ. ಶವಾಗಾರದಲ್ಲಿ ಎಷ್ಟು ಬಯಾಪ್ಸಿ ಮಾದರಿಗಳನ್ನು ಸಂಗ್ರಹಿಸಲಾಗಿತ್ತು? ಅವುಗಳಲ್ಲಿ ಮಾರಾಟವಾಗಿರುವ ಮಾದರಿಗಳು ಎಷ್ಟು? ಎಂಬಿತ್ಯಾದಿ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ’ ಎಂದು ಹೇಳಿದರು.

ಹಲವು ವೈದ್ಯಕೀಯ ಸಂಸ್ಥೆಗಳಿಗೆ ಮಾರಾಟ: ‘ಕೇರಳದ ರಘುರಾಮ್ ಹಾಗೂ ಬೇರೆ ವೈದ್ಯಕೀಯ ಸಂಸ್ಥೆಗಳಿಗೆ ಬಯಾಪ್ಸಿ ಮಾದರಿಗಳನ್ನು ಮಾರಾಟ ಮಾಡಿರುವುದು ಸದ್ಯಕ್ಕೆ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ನಿಮ್ಹಾನ್ಸ್ ವಿಭಾಗವೊಂದರ ಮುಖ್ಯಸ್ಥರಾದ ಡಾ. ಅನಿತಾ ಮಹಾದೇವನ್ ಹಾಗೂ ಹೆಚ್ಚುವರಿ ಪ್ರಾಧ್ಯಾಪಕ ಡಾ. ಬಿ.ಎನ್. ನಂದೀಶ್ ಅವರು ಡಿ.23ರಂದು ಶವಾಗಾರಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಬಯಾಪ್ಸಿ ಮಾದರಿಗಳು ನಾಪತ್ತೆಯಾಗಿದ್ದು ಗಮನಕ್ಕೆ ಬಂದಿತ್ತು. ಆರೋಪಿಗಳನ್ನು ವಿಚಾರಿಸಿದಾಗ, ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.