ADVERTISEMENT

ನಿಮ್ಹಾನ್ಸ್ | ಖಾಸಗಿ ಸಹಭಾಗಿತ್ವದಡಿ ‘ಟೆಲಿ ಮನಸ್’ ಸೇವೆ

ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್‌ ಜತೆಗೆ ನಿಮ್ಹಾನ್ಸ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 19:30 IST
Last Updated 24 ಫೆಬ್ರುವರಿ 2023, 19:30 IST
ಟೆಲಿ ಮನಸ್‌ ಸೇವೆಗೆ ಸಂಬಂಧಿಸಿದಂತೆ ನೀರಜಾ ಬಿರ್ಲಾ ಹಾಗೂ ಡಾ. ಪ್ರತಿಮಾ ಮೂರ್ತಿ ಒಪ್ಪಂದಕ್ಕೆ ಸಹಿ ಹಾಕಿದರು. 
ಟೆಲಿ ಮನಸ್‌ ಸೇವೆಗೆ ಸಂಬಂಧಿಸಿದಂತೆ ನೀರಜಾ ಬಿರ್ಲಾ ಹಾಗೂ ಡಾ. ಪ್ರತಿಮಾ ಮೂರ್ತಿ ಒಪ್ಪಂದಕ್ಕೆ ಸಹಿ ಹಾಕಿದರು.    

ಬೆಂಗಳೂರು: ಮನೋರೋಗಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಸಮಾಲೋಚನೆ ನಡೆಸುವ ‘ಟೆಲಿ ಮನಸ್’ ಸಹಾಯವಾಣಿ ಸೇವೆ ವಿಸ್ತರಣೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್‌ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಹಾಗೂ ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷೆ ನೀರಜಾ ಬಿರ್ಲಾ ಒಪ್ಪಂದಕ್ಕೆ ಸಹಿ ಹಾಕಿದರು. ಈ ಮೂಲಕ ಖಾಸಗಿ ಸಹಭಾಗಿತ್ವದಡಿ ‘ಟೆಲಿ ಮನಸ್’ ಸೇವೆ ವಿಸ್ತರಿಸಲಾಗುತ್ತಿದೆ.

‘ಟೆಲಿ ಮನಸ್ ಯೋಜನೆ ಆರಂಭಕ್ಕೆ ಕರ್ನಾಟಕದ ಇ-ಮನಸ್ ಸೇವೆ ಪ್ರೇರಣೆ. ಕೋವಿಡ್ ಸಂಕಷ್ಟದ ವೇಳೆ ಮಕ್ಕಳೂ ಸೇರಿ ಎಲ್ಲ ವಯಸ್ಸಿನವರು ಮಾನಸಿಕ ಅನಾರೋಗ್ಯ ಸಮಸ್ಯೆಯಿಂದ ಬಳಲಿದ್ದರು. ಈ ವೇಳೆ ಟೆಲಿ ಮನಸ್ ಯೋಜನೆ ಪ್ರಾರಂಭಿಸಿ, ಸಾವಿರಾರು ಮಂದಿಗೆ ದೂರವಾಣಿ ಮೂಲಕ ಸಲಹೆ ನೀಡಲಾಯಿತು’ ಎಂದು ಡಾ. ಪ್ರತಿಮಾ ಮೂರ್ತಿ ತಿಳಿಸಿದರು.

ADVERTISEMENT

‘ಎಲ್ಲ ರೀತಿಯ ಮಾನಸಿಕ ಸಮಸ್ಯೆಗಳಿಗೆ ‘ಟೆಲಿ ಮನಸ್’ ಸಹಾಯವಾಣಿ ಮೂಲಕ 20 ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಟೆಲಿ ಮನಸ್ ಸೆಲ್ ಸ್ಥಾಪಿಸಿ, ಅದರ ಮೂಲಕ ಆಪ್ತ ಸಮಾಲೋಚನೆ ಸೇವೆ ನೀಡಲಾಗುವುದು. ಮಾನಸಿಕ ತಜ್ಞರ ಕೊರತೆ ನೀಗಿಸಲು ಈ ಯೋಜನೆ ಸಹಕಾರಿಯಾಗಿದೆ’ ಎಂದು ಹೇಳಿದರು.

2,400 ಕರೆಗಳು: ‘ಸಂಸ್ಥೆಯ ಬೆಂಗಳೂರು ಹಾಗೂ ಧಾರವಾಡದ ಕೇಂದ್ರದಲ್ಲಿ ಟೆಲಿ ಮನಸ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ದೂರವಾಣಿ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಈವರೆಗೂ ಸುಮಾರು 2,400 ಕರೆಗಳು ಬಂದಿವೆ. ಖಿನ್ನತೆ, ಮಾನಸಿಕ ಒತ್ತಡ ಹಾಗೂ ನಿದ್ದೆ ಬಾರದಿರುವ ಬಗ್ಗೆ ಹೆಚ್ಚಿನ ಕರೆಗಳು ಬರುತ್ತಿವೆ’ ಎಂದು ಡಾ. ಪ್ರತಿಮಾ ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.