ಬೆಂಗಳೂರು: ‘ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವವರಲ್ಲಿ ಹೆಚ್ಚಿನವರು ಯುವಜನರೇ ಆಗಿದ್ದು, ಹಲವರು ಮದ್ಯ ಮತ್ತು ತಂಬಾಕು ಉತ್ಪನ್ನಗಳ ಸೇವನೆಯ ದುಶ್ಚಟ ಹೊಂದಿದ್ದಾರೆ’ ಎನ್ನುವುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಎನ್–ಸ್ಪ್ರೈಟ್ ಕೇಂದ್ರ ನಡೆಸಿದ ಅಧ್ಯನದಿಂದ ದೃಢಪಟ್ಟಿದೆ.
ವಿಶ್ವ ಆತ್ಮಹತ್ಯೆ ತಡೆ ದಿನದ ಪ್ರಯುಕ್ತ ಸಂಸ್ಥೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಲಾಯಿತು. ಈ ಕೇಂದ್ರವು ಆತ್ಮಹತ್ಯೆ ತಡೆಗಟ್ಟುವಿಕೆ, ಸಂಶೋಧನೆ, ತರಬೇತಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್ಎಂ) ಸಹಯೋಗದಲ್ಲಿ ‘ಉಷಾಸ್’ (ನಗರ ಸ್ವಯಂ-ಹಾನಿ ಅಧ್ಯಯನ) ಯೋಜನೆ ಕೈಗೊಂಡಿದ್ದು, ಈ ಯೋಜನೆಯಡಿ ಆತ್ಮಹತ್ಯೆಗೆ ಪ್ರಯತ್ನಿಸಿದವರ ಅಧ್ಯಯನ ಕೈಗೊಳ್ಳಲಾಗಿದೆ.
11 ಜಿಲ್ಲೆಗಳ 16 ಸರ್ಕಾರಿ ಆಸ್ಪತ್ರೆಗಳಲ್ಲಿ ‘ಉಷಾಸ್’ ಯೋಜನೆಯನ್ನು 2022ರಿಂದ ಜಾರಿ ಮಾಡಲಾಗಿದೆ. ಆತ್ಮಹತ್ಯೆ ಪ್ರಯತ್ನ ಮಾಡಿದವರಿಗೆ ಆತ್ಮಸ್ಥೈರ್ಯ ತುಂಬಿ, ಅವರಿಗೆ ಬೆಂಬಲ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಆತ್ಮಹತ್ಯೆಗೆ ಪ್ರಯತ್ನ ಮಾಡಿದವರಲ್ಲಿ, ಈವರೆಗೆ 20,861 ಮಂದಿ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ. ಅವರಲ್ಲಿ ಹೆಚ್ಚಿನವರು 25ರಿಂದ 39 ವರ್ಷದೊಳಗಿನವರು (ಶೇ 44.37) ಆಗಿದ್ದಾರೆ. 18ರಿಂದ 24 ವರ್ಷದೊಳಗಿನವರೂ (ಶೇ 28.87) ಅಧಿಕ ಸಂಖ್ಯೆಯಲ್ಲಿ ಇದ್ದಾರೆ.
‘ಉಷಾಸ್’ ಯೋಜನೆಯಡಿ ನೋಂದಾಯಿತರಾದವರಲ್ಲಿ ಶೇ 55.76 ರಷ್ಟು ಮಂದಿ ಪುರುಷರಾದರೆ, ಶೇ 44.15 ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಶೇ 0.09 ರಷ್ಟು ಮಂದಿ ಲಿಂಗತ್ವ ಅಲ್ಪಸಂಖ್ಯಾತರಾಗಿದ್ದಾರೆ. 20,861 ವ್ಯಕ್ತಿಗಳಲ್ಲಿ 16,264 ಮಂದಿ ಜತೆಗೆ ನಿರಂತರ ಸಂಪರ್ಕ ಸಾಧಿಸಲಾಗಿದೆ. ಇದರಿಂದಾಗಿ ಕೇವಲ 194 ವ್ಯಕ್ತಿಗಳು (ಶೇ 1.19) ಮಾತ್ರ ಆತ್ಮಹತ್ಯೆಗೆ ಪುನಃ ಪ್ರಯತ್ನಿಸಿದ್ದಾರೆ. ಅವರಲ್ಲಿ 37 ಮಂದಿ ಮಾತ್ರ (ಶೇ 0.2) ಮರು ಪ್ರಯತ್ನದಿಂದ ಮೃತಪಟ್ಟರು ಎಂದು ಎನ್–ಸ್ಪ್ರೈಟ್ ಕೇಂದ್ರದ ಮುಖ್ಯಸ್ಥ ಡಾ. ಅನೀಶ್ ವಿ. ಚೆರಿಯನ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ‘ಆತ್ಮಹತ್ಯೆ ಪ್ರಯತ್ನದ ನಂತರ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡುವ ವ್ಯಕ್ತಿಗಳ ವಿವರವನ್ನು ದಾಖಲಿಸಲು ‘ಉಷಾಸ್’ ಯೋಜನೆ ಅಡಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಅವರ ಗುಣಲಕ್ಷಣಗಳನ್ನು ಅಧ್ಯಯನ ಮಾಡಲಾಗುತ್ತದೆ. ಭವಿಷ್ಯದಲ್ಲಿ ಮತ್ತೆ ಆತ್ಮಹತ್ಯೆ ಪ್ರಯತ್ನಕ್ಕೆ ಒಳಗಾಗದಂತೆ ನೋಡಿಕೊಳ್ಳಲು ದೂರವಾಣಿ ಮೂಲಕ ಸಂಪರ್ಕ ಕಾಯ್ದುಕೊಳ್ಳಲಾಗುತ್ತದೆ. ಇದರಿಂದಾಗಿ ಆತ್ಮಹತ್ಯೆಯ ಮರು ಪ್ರಯತ್ನ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಹೇಳಿದರು.
ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್, ಆರೋಗ್ಯ ಇಲಾಖೆಯ ಉಪ ನಿರ್ದೇಶಕಿ (ಮಾನಸಿಕ ಆರೋಗ್ಯ) ಡಾ. ರಜನಿ ಪಾರ್ಥಸಾರಥಿ ಹಾಗೂ ವಿವಿಧ ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.