ಬೆಂಗಳೂರು: ಕೇರಳದ ಮಲಪ್ಪುರಂ ಜಿಲ್ಲೆಯು ನಿಫಾ ಸೋಂಕಿನಿಂದ ಸುರಕ್ಷಿತವೆಂದು ಘೋಷಿಸುವವರೆಗೆ ಆ ಪ್ರದೇಶಕ್ಕೆ ಪ್ರಯಾಣ ಮಾಡದಿರುವುದು ಒಳಿತು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಮಲಪ್ಪುರಂನಲ್ಲಿ ಜುಲೈ 21ರಂದು ನಿಫಾ ಪ್ರಕರಣ ದೃಢಪಟ್ಟಿದೆ. 14 ವರ್ಷದ ಬಾಲಕ ಈ ಸೋಂಕಿನಿಂದ ಮೃತಪಟ್ಟಿದ್ದಾನೆ. ರಾಜ್ಯದಲ್ಲಿ ಈವರೆಗೆ ಯಾವುದೇ ನಿಫಾ ಪ್ರಕರಣ ವರದಿಯಾಗಿಲ್ಲ. ಕೇರಳದಲ್ಲಿ ನಿಫಾ ಪ್ರಕರಣ ವರದಿಯಾದಾಗಲೆಲ್ಲ ಗಡಿಯಾಚೆಗೆ ಸೋಂಕು ಹರಡುವುದನ್ನು ತಡೆಯಲು ರಾಜ್ಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ (ಐಡಿಎಸ್‌ಪಿ) ಯೋಜನಾ ನಿರ್ದೇಶಕರು ಹೇಳಿದ್ದಾರೆ.
ಮಲಪ್ಪುರಂನಲ್ಲಿ ವರದಿಯಾದ ಪ್ರಕರಣದಲ್ಲಿ ಸಂಪರ್ಕಿತರಿಗೆ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ ಸೋಂಕು ದೃಢಪಟ್ಟಿಲ್ಲ. ಆದ್ದರಿಂದ ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ತುಂಬಾ ಕಡಿಮೆಯಿದ್ದು, ಭಯಪಡಬೇಕಾದ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಅತ್ಯವಶ್ಯವಾಗಿರದಿದ್ದಲ್ಲಿ ಅಲ್ಲಿಗೆ ಪ್ರಯಾಣ ತಪ್ಪಿಸುವುದು ಉತ್ತಮ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.