ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡುತ್ತಿರುವುದು ಎಂಬಂತೆ ಬಿಂಬಿಸಿದ ನಕಲಿ ವಿಡಿಯೊ ತುಣುಕನ್ನು ಸೈಬರ್ ಕಳ್ಳರು ಬಳಸಿಕೊಂಡು, ವೃದ್ಧರೊಬ್ಬರಿಗೆ ₹ 1 ಲಕ್ಷ ವಂಚನೆ ಮಾಡಿದ್ದಾರೆ.
ದೊಡ್ಡಬೊಮ್ಮಸಂದ್ರ ನಿವಾಸಿ ವೇಣುಗೋಪಾಲ್ ಅವರು ನೀಡಿದ ದೂರು ಆಧರಿಸಿ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
‘ಕಡಿಮೆ ಹಣ ಹೂಡಿದರೆ ತ್ವರಿತವಾಗಿ ಹೆಚ್ಚು ಲಾಭ ಗಳಿಸಬಹುದು’ ಎಂಬ ಜಾಹೀರಾತನ್ನು ಆಗಸ್ಟ್ 27ರಂದು ವೇಣುಗೋಪಾಲ್ ಅವರು ಸಾಮಾಜಿಕ ಜಾಲತಾಣ ಯೂಟ್ಯೂಬ್ನಲ್ಲಿ ನೋಡಿದ್ದರು. ಅದರಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಾತನಾಡುತ್ತಿರುವಂತೆ ಸೃಷ್ಟಿಸಿರುವ ವಿಡಿಯೊ ತುಣುಕನ್ನು ವಂಚಕರು ಬಳಸಿಕೊಂಡಿದ್ದರು. ಹಣ ಹೂಡಿಕೆ ಮಾಡಲು ನಿರ್ಧರಿಸಿದ ವೇಣುಗೋಪಾಲ್, ಸಂಬಂಧಿಸಿದ ಆ್ಯಪ್ ಡೌನ್ಲೋಡ್ ಮಾಡಿ ನೋಂದಣಿ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ನೋಂದಣಿಯಾದ ತಕ್ಷಣ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ‘ಟ್ರೇಡಿಂಗ್ ಮ್ಯಾನೇಜರ್’ ಎಂದು ಪರಿಚಯಿಸಿಕೊಂಡು, ₹22 ಸಾವಿರ ಹೂಡಿಕೆ ಮಾಡುವಂತೆ ತಿಳಿಸಿದ್ದ. ಆತನ ಸೂಚನೆಯಂತೆ ಆನ್ಲೈನ್ ಮೂಲಕ ಹಣ ಪಾವತಿಸಿದೆ. ಬಳಿಕ ವಿವಿಧ ಕಾರಣಗಳನ್ನು ನೀಡಿ ಹಂತ-ಹಂತವಾಗಿ ₹1.04 ಲಕ್ಷ ಹೂಡಿಕೆ ಮಾಡಿಸಿಕೊಂಡ ಸೈಬರ್ ಕಳ್ಳರು ಹಣ ನೀಡದೆ ವಂಚಿಸಿದ್ದಾರೆ’ ಎಂದು ವೇಣುಗೋಪಾಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಜನರ ವಿಶ್ವಾಸ ಗಳಿಸಲು ಜನಪ್ರಿಯ ವ್ಯಕ್ತಿಗಳು ಅಥವಾ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ನಕಲಿ ವಿಡಿಯೊಗಳನ್ನು ವಂಚಕರು ಬಳಸುತ್ತಾರೆ. ಈ ವಿಡಿಯೊಗಳನ್ನು ನಂಬಿ ಹೂಡಿಕೆ ಮಾಡಿದರೆ, ತಮ್ಮ ಹಣವನ್ನು ಮರಳಿ ಪಡೆಯುವುದು ಅಸಾಧ್ಯ. ಹಣಕಾಸು, ಹೂಡಿಕೆ ಯೋಜನೆಗಳು ಅಥವಾ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಯಾವುದೇ ಪ್ರಕಟಣೆಗಳಿಗೆ ಕೇಂದ್ರದ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಗಮನಿಸುವುದು ಸೂಕ್ತ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ವಿಡಿಯೊ ನಕಲಿಯಾಗಿದ್ದು, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನಿರ್ಮಲಾ ಸೀತಾರಾಮನ್ ಅವರ ಧ್ವನಿಯನ್ನು ಅನುಕರಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.