ಬೆಂಗಳೂರು: ‘ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್‌ಪಿ (ಉಪ ಪೊಲೀಸ್ ವರಿಷ್ಠಾಧಿಕಾರಿ) ನನಗೆ ಕಿರುಕುಳ ನೀಡುತ್ತಿದ್ದಾರೆ, ರಕ್ಷಣೆ ಒದಗಿಸಿ’ ಎಂದು ಮುಕ್ತ ನ್ಯಾಯಾಲಯದಲ್ಲಿ ಮನವಿ ಮಾಡಿದ್ದ ಕೆಪಿಟಿಸಿಎಲ್‌ನ ಸಹಾಯಕ ಎಂಜಿನಿಯರ್ ಎಂ.ಜಿ.ಶಾಂತಕುಮಾರ ಸ್ವಾಮಿ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು’ ಎಂದು ಹೈಕೋರ್ಟ್ ಪೊಲೀಸರಿಗೆ ನಿರ್ದೇಶಿಸಿದೆ.
‘ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ, ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ನನ್ನ ವಿರುದ್ಧ ದಾಖಲಾಗಿರುವ ಮೂರು ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕು’ ಎಂದು ಕೋರಿ ಶಾಂತಕುಮಾರ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಅರ್ಜಿದಾರರ ವಿರುದ್ಧ ಯುವತಿಯೊಬ್ಬರು ದೂರು ದಾಖಲಿಸಿದ್ದಾರೆ. ವಾಸ್ತವವಾಗಿ ಅರ್ಜಿದಾರರು ದೂರುದಾರ ಯುವತಿ ಜೊತೆ ಕದ್ದುಮುಚ್ಚಿ ಎರಡನೇ ಮದುವೆಯಾಗುವ ಸಿದ್ಧತೆ ನಡೆಸಿದ್ದರು. ಆದರೆ ಮೊದಲ ಮದುವೆಯ ವಿಷಯ ತಿಳಿದು ದೂರುದಾರ ಯುವತಿ ಮದುವೆ ಪ್ರಸ್ತಾಪ ರದ್ದುಗೊಳಿಸಿದ್ದರು. ಇದರಿಂದ ಕೋಪಗೊಂಡ ಅರ್ಜಿದಾರ, ಯುವತಿ ವಾಸಿಸುವ ಗ್ರಾಮದಲ್ಲಿ ಆಕೆಯ ಕುರಿತಾಗಿ ದೊಡ್ಡ ಬ್ಯಾನರ್ ಹಾಕಿಸಿದ್ದಾರೆ. ಇಂತಹ ಕೃತ್ಯಕ್ಕೆ ಮುಂದಾಗದಂತೆ ಅರ್ಜಿದಾರರಿಗೆ ಎಚ್ಚರಿಕೆ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ತೀವ್ರ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ, ‘ಏನ್ರಿ ಇದೆಲ್ಲಾ? ಹೀಗೆಲ್ಲಾ ಏಕೆ’ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು, ‘ಶಾಂತಕುಮಾರ ಸ್ವಾಮಿ ಬ್ಯಾನರ್ ಹಾಕಿಲ್ಲ’ ಎಂದು ಸಮಜಾಯಿಷಿ ನೀಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಕೋರ್ಟ್‌ಗೆ ಸಲ್ಲಿಸಿ’ ಎಂದು ಅರ್ಜಿದಾರ ಹಾಗೂ ಸರ್ಕಾರಿ ವಕೀಲರಿಗೆ ಸೂಚಿಸಿತು. ಅಂತೆಯೇ, ‘ಅರ್ಜಿದಾರರ ವಿರುದ್ಧ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.