ADVERTISEMENT

‘ಅರಿವಿಲ್ಲದೆ ಮಾಡುವ ತಪ್ಪಿಗೂ ಕ್ಷಮೆ ಇಲ್ಲ’

ಮಾನವ ಹಕ್ಕುಗಳ ಒಂದು ದಿನದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 7:42 IST
Last Updated 5 ನವೆಂಬರ್ 2019, 7:42 IST
ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ. ಎನ್. ಸತೀಶ್‌ಗೌಡ (ಎಡದಿಂದ ಮೊದಲನೆಯವರು) ಮತ್ತು ಎಚ್.ಕೆ. ಜಗದೀಶ್‌ ಸಮಾಲೋಚನೆ ನಡೆಸಿದರು. ಕುಲಪತಿ ಡಾ.ಕೆ.ಆರ್. ವೇಣುಗೋಪಾಲ, ಕುಲಸಚಿವ ಡಾ. ಬಿ.ಕೆ. ರವಿ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್ ಇದ್ದರು --ಡ–ಪ್ರಜಾವಾಣಿ ಚಿತ್ರ
ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ. ಎನ್. ಸತೀಶ್‌ಗೌಡ (ಎಡದಿಂದ ಮೊದಲನೆಯವರು) ಮತ್ತು ಎಚ್.ಕೆ. ಜಗದೀಶ್‌ ಸಮಾಲೋಚನೆ ನಡೆಸಿದರು. ಕುಲಪತಿ ಡಾ.ಕೆ.ಆರ್. ವೇಣುಗೋಪಾಲ, ಕುಲಸಚಿವ ಡಾ. ಬಿ.ಕೆ. ರವಿ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ.ರೇವಯ್ಯ ಒಡೆಯರ್ ಇದ್ದರು --ಡ–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾನೂನಿನ ಅರಿವಿಲ್ಲದೆ ಅಪರಾಧ ಎಸಗಿದರೂ ನ್ಯಾಯಾಲಯಗಳು ಆರೋಪಿಗೆ ಕ್ಷಮೆ ನೀಡುವುದಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ’ ಎಂದು ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿ ಎಚ್.ಕೆ. ಜಗದೀಶ್ ಹೇಳಿದರು.

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಸೋಮವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ಒಂದು ದಿನ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹುಟ್ಟಿನಿಂದ ಸಾವಿನ ತನಕ ಎಲ್ಲರೂ ಕಾನೂನಿನ ಪರಿಧಿಯಲ್ಲೇ ಸಾಗಬೇಕಾಗುತ್ತಿದೆ. ಕಾನೂನಿಲ್ಲದಿದ್ದರೆ ವ್ಯವಸ್ಥಿತವಾಗಿ ಜೀವನ ನಡೆಸುವುದು ಕಷ್ಟ. ಹೀಗಾಗಿ ಕಾನೂನಿನ ಬಗ್ಗೆಎಲ್ಲರೂ ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಆರ್. ವೇಣುಗೋಪಾಲ, ‘ಎಲ್ಲರೂ ತಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಕರ್ತವ್ಯಗಳನ್ನು ಮರೆಯುತ್ತಾರೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಿಸಿದರೆ ಮಾನವ ಹಕ್ಕುಗಳ ರಕ್ಷಣೆ ತಾನಾಗೇ ಆಗಲಿದೆ. ತಂದೆ–ತಾಯಿಯನ್ನು ಗೌರವಿಸುವುದು ಮಕ್ಕಳ ಕರ್ತವ್ಯ ಎಂದು ಪರಿಗಣಿಸಿದರೆ, ಪೋಷಕರ ಮಾನವ ಹಕ್ಕು ರಕ್ಷಣೆಯಾಗುತ್ತದೆ’ ಎಂದರು.

ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ವಿ.ಸುದೇಶ್‌, ‘ಕನ್ನಡ ನಾಡಿನಲ್ಲಿ ಮಾನವ ಹಕ್ಕುಗಳ ಬಗ್ಗೆ ಮೊದಲು ಧ್ವನಿ ಎತ್ತಿದವರು ಬಸವಣ್ಣ. ಮಾನವ ಹಕ್ಕುಗಳ ವಿಷಯದಲ್ಲಿ ಅವರ ತತ್ವಗಳು ವಿಶ್ವಕ್ಕೆ ಮಾದರಿ. ಗಾಂಧೀಜಿ, ಡಾ.ಅಂಬೇಡ್ಕರ್ ಅವರು ಮಾನವ ಹಕ್ಕುಗಳ ರಕ್ಷಣೆಗೆ ಶ್ರಮಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.