ADVERTISEMENT

ಸದ್ಯಕ್ಕಿಲ್ಲ ಕೋವಿಡ್ ಆತಂಕ: ತಾಂತ್ರಿಕ ಸಲಹಾ ಸಮಿತಿ

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ಪ್ರಕರಣಗಳ ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 22:07 IST
Last Updated 22 ಜನವರಿ 2023, 22:07 IST
   

ಬೆಂಗಳೂರು: ‘ಬೆಂಗಳೂರು ಸೇರಿ ರಾಜ್ಯದಲ್ಲಿ ಕಳೆದ 15 ದಿನಗಳು ವರದಿಯಾಗಿರುವ ಕೋವಿಡ್ ಹೊಸ ಪ್ರಕರಣಗಳನ್ನು ವಿಶ್ಲೇಷಿಸಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ‘ಕೊರೊನಾ ರೂಪಾಂತರಿ ಹೊಸ ತಳಿ ಪತ್ತೆಯಾಗಿಲ್ಲ. ಹೀಗಾಗಿ, ಸದ್ಯಕ್ಕೆ ಕೋವಿಡ್ ಆತಂಕವಿಲ್ಲ’ ಎಂದು ತಿಳಿಸಿದೆ.

ವಾರದಿಂದ ಸೋಂಕು ದೃಢ ಪ್ರಮಾಣ ಶೇ 0.11ರಷ್ಟಿದೆ. ಮರಣ ಪ್ರಮಾಣ ದರ ಶೂನ್ಯಕ್ಕೆ ಇಳಿಕೆಯಾಗಿದೆ. ಸದ್ಯ 146 ಸಕ್ರಿಯ ಪ್ರಕರಣಗಳಿದ್ದು, 8 ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ.

‘15 ದಿನಗಳ ಕೋವಿಡ್ ಪ್ರಕರಣಗಳನ್ನು ವಿಶ್ಲೇಷಣೆ ಮಾಡಲಾಗಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಉತ್ತಮವಾಗಿದೆ. ಕೋವಿಡ್‌ಗೆ ಜ. 17ರಂದು ಕೊಪ್ಪಳದಲ್ಲಿ 65 ವರ್ಷದ ಮಹಿಳೆಯೊಬ್ಬರು ಮಾತ್ರ ಮೃತಪಟ್ಟಿದ್ದಾರೆ’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್ ತಿಳಿಸಿದ್ದಾರೆ.

ADVERTISEMENT

‘ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, 15 ದಿನಗಳಲ್ಲಿ 10 ಮಂದಿಯಲ್ಲಿ ಮಾತ್ರ ಪ್ರಕರಣ ವರದಿಯಾಗಿದೆ. ಶೇ 0.3ರಷ್ಟು ಸೋಂಕು ದೃಢ ಪ್ರಮಾಣವಿದೆ. ದೃಢಪಟ್ಟ ಪ್ರಕರಣಗಳ ಮಾದರಿಗಳನ್ನು ವೈರಾಣು ವಂಶವಾಹಿ ಸಂರಚನಾ ವಿಶ್ಲೇಷಣೆಗೆ (ಜೀನೋಮ್‌ ಸೀಕ್ವೆನ್ಸಿಂಗ್‌) ಕಳುಹಿಸಲಾಗಿದೆ. ಈವರೆಗೂ ಹೊಸ ರೂಪಾಂತರಿ ಪ‍ತ್ತೆಯಾಗಿಲ್ಲ’ ಎಂದು ಹೇಳಿದ್ದಾರೆ.

‘ಕೋವಿಡ್ ಆತಂಕ ಇಲ್ಲವಾದರೂ ಡಯಾಲಿಸಿಸ್, ಯಕೃತ್ತಿನ ಕಾಯಿಲೆ, ಕ್ಯಾನ್ಸರ್ ಮತ್ತು ಸಹ-ಅಸ್ವಸ್ಥ ಸ್ಥಿತಿಯಲ್ಲಿರುವಂತಹರು ಮತ್ತು ಹೆಚ್ಚಿನ ಅಪಾಯದ ಗುಂಪುಗಳ ಜನರು ಜಾಗ್ರತೆ ವಹಿಸಬೇಕು. ರಾಜ್ಯ ಸರ್ಕಾರ ಆಯೋಜಿಸುವ ವಿಶೇಷ ಲಸಿಕೆ ಶಿಬಿರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.