ADVERTISEMENT

ಕೋವಿಡ್‌: ಮೃತದೇಹಗಳಿಗೆ ದಹನ ಶುಲ್ಕ ವಿನಾಯಿತಿ

ಚಿತಾಗಾರದ ಸಿಬ್ಬಂದಿಗೆ ₹ 500 ಪ್ರೋತ್ಸಾಹ ಧನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 19:27 IST
Last Updated 25 ಜುಲೈ 2020, 19:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟವರ ದೇಹದ ಅಂತ್ಯಕ್ರಿಯೆಗೆ ಬಿಬಿಎಂಪಿಯ ವಿದ್ಯುತ್‌ ಚಿತಾಗಾರಗಳಲ್ಲಿ ₹ 250 ದಹನ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಕೋವಿಡ್‌ ಮೃತದೇಹಕ್ಕೆ ಚಿತಾಗಾರ ಸಿಬ್ಬಂದಿಗೆ ಇದುವರೆಗೆ ಬಿಬಿಎಂಪಿ ಯಾವುದೇ ಪ್ರೋತ್ಸಾಹ ಧನ ನೀಡುತ್ತಿರಲಿಲ್ಲ. ಹಾಗಾಗಿ ಕೆಲವು ಚಿತಾಗಾರಗಳ ಸಿಬ್ಬಂದಿ ಕೋವಿಡ್‌ನಿಂದ ಮೃತಪಟ್ಟವರ ಬಂಧುಗಳಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಸಲ್ಲಿಸುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿಬಿಬಿಎಂಪಿಯ ವಿಶೇಷ ಆಯುಕ್ತರು (ಆರೋಗ್ಯ) ಕೋವಿಡ್‌ ಮೃತದೇಹಗಳ ಅಂತ್ಯಕ್ರಿಯೆಗ ದಹನ ಶುಲ್ಕದಿಂದ ವಿನಾಯಿತಿ ನೀಡುವುದರ ಜತೆಗೆ ಇಂತಹ ಮೃತದೇಹಗಳ ಚಟ್ಟಕ್ಕೆ ₹ 900, ಬೂದಿ ಸಂಗ್ರಹಿಸುವ ಪಾತ್ರೆ ಅಥವಾ ಮಡಿಕೆಗೆ ತಲಾ ₹ 100 ಪಾವತಿಸುವಂತೆ ಆದೇಶ ಮಾಡಿದ್ದಾರೆ. ಚಿತಾಗಾರಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕೋವಿಡ್‌ ಸೊಂಕಿತರ ದೇಹದ ಅಂತ್ಯಕ್ರಿಯೆಗೆ ತಲಾ ₹ 500 ಪ್ರೋತ್ಸಾಹಧನ ನೀಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತಿ ತಿಂಗಳಲ್ಲಿ ಕೋವಿಡ್‌ನಿಂದ ಸತ್ತವರ ಎಷ್ಟು ಶವಗಳ ಅಂತ್ಯಕ್ರಿಯೆ ನಡೆಸಲಾಗಿದೆ ಎಂಬ ಆಧಾರದಲ್ಲಿ 2020-21 ನೇ ಸಾಲಿನ ಬಜೆಟ್‌ನಲ್ಲಿ ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಪಿ–ಕೋಡ್‌ ಅಡಿ ಈ ಪಾವತಿಗಳನ್ನು ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ನಾಲ್ಕು ಚಿತಾಗಾರ ಮೀಸಲು: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ರಾಜರಾಜೇಶ್ವರಿನಗರ ವಲಯದ ಕೆಂಗೇರಿ, ಯಲಹಂಕ ವಲಯದ ಮೇಡಿ ಅಗ್ರಹಾರ, ಬೊಮ್ಮನಹಳ್ಳಿವಲಯದ ಕೂಡ್ಲು ಹಾಗೂ ಮಹದೇವಪುರ ವಲಯದ ಪಣತ್ತೂರು ಚಿತಾಗಾರಗಳನ್ನು ಮೀಸಲಿರಿಸಿ ಆದೇಶ ಮಾಡಲಾಗಿದೆ.

ಚಿತಾಗಾರಗಳ ಸಿಬ್ಬಂದಿ ಶವಗಳನ್ನು ಸುಡುವ ಸಂದರ್ಭದಲ್ಲಿ ಕಡ್ಡಾಯವಾಗಿ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ ಕಿಟ್) ಧರಿಸಬೇಕು. ಕೈಗಳನ್ನು ಸ್ಯಾನಿಟೈಸರ್ ಬಳಸಿ ಆಗಾಗ ತೊಳೆಯಬೇಕು. ಶವ ಸಾಗಿಸಲು ಉಪಯೋಗಿಸುವ ಪರಿಕರಗಳ ಸುರಕ್ಷಿತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಮೃತದೇಹದ ನಿರ್ವಹಣೆಯಲ್ಲಿ ಬಳಕೆಯಾಗುವ ಚೀಲ ಮತ್ತು ಸಲಕರಣೆಗಳಿಗೆ, ಮೃತ ದೇಹವನ್ನು ಇಡುವ ಜಾಗಕ್ಕೆ, ಅಲ್ಲಿನ ಪರಿಸರಕ್ಕೆ ಸೋಂಕು ನಿವಾರಕ ಸಿಂಪಡಿಸಬೇಕು. ಶವ ಸಾಗಿಸುವ ವಾಹನಗಳನ್ನು ಸೋಂಕು ನಿವಾರಣಾ ದ್ರಾವಣ ಬಳಸಿ ಶುಚಿಗೊಳಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.